ಅಕ್ಟೋಬರ್ 10ರ ಒಳಗೆ ಸಿಬಿಎಸ್ಇ 12ನೇ ತರಗತಿ ಪೂರಕ ಪರೀಕ್ಷೆ ಫಲಿತಾಂಶ
ಹೊಸದಿಲ್ಲಿ, ಸೆ. 24: ಸಿಬಿಎಸ್ಇ 12ನೇ ತರಗತಿಯ ಪೂರಕ ಪರೀಕ್ಷೆ ಫಲಿತಾಂಶವನ್ನು ಅಕ್ಟೋಬರ್ 10ರ ಒಳಗೆ ಪ್ರಕಟಿಸಲಾಗುವುದು ಎಂದು ಸಿಬಿಎಸ್ಇ ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಿದೆ.
ವಿದ್ಯಾರ್ಥಿಗಳ ಈ ವರ್ಷದ ದಾಖಲಾತಿ ಪ್ರಕ್ರಿಯೆಗೆ ಯುಜಿಸಿಯೊಂದಿಗೆ ಸಮನ್ವಯ ಮಾಡಿಕೊಳ್ಳಲಾಗಿದೆ. ಫಲಿತಾಂಶ ಸಿಬಿಎಸ್ಇಯ ಅಧಿಕೃತ ವೆಬ್ಸೈಟ್ಗಳಲ್ಲಿ ಲಭ್ಯವಾಗಲಿದೆ ಎಂದು ಕೂಡ ಸಿಬಿಎಸ್ಇ ಸುಪ್ರೀಂ ಕೋರ್ಟ್ಗೆ ತಿಳಿಸಿತು.
ಪೂರಕ ಪರೀಕ್ಷೆ ಹಾಗೂ ಫಲಿತಾಂಶ ಪ್ರಕಟ ವಿಳಂಬವಾಗಿರುವುದರಿಂದ ಕಾಲೇಜು ದಾಖಲಾತಿಯ ಅಂತಿಮ ಗಡುವನ್ನು ವಿಸ್ತರಿಸುವಂತೆ ಕೋರಿ ವಿದ್ಯಾರ್ಥಿಯೋರ್ವ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಿಚಾರಣೆ ನಡೆಸಿತು.
ಇದಕ್ಕೆ ಪ್ರತಿಕ್ರಿಯಿಸಿದ ಯುಜಿಸಿ ದಾಖಲಾತಿ ಪ್ರಕ್ರಿಯೆಯನ್ನು ಅಕ್ಟೋಬರ್ 31ಕ್ಕೆ ಅಂತ್ಯಗೊಳಿಸಲಾಗುವುದು. ಇದು ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳಿಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಯಾವಕಾಶ ಒದಗಿಸಲಿದೆ ಎಂದು ತಿಳಿಸಿತು.
ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠ ವಿದ್ಯಾರ್ಥಿಯ ಮನವಿಯ ವಿಚಾರಣೆ ನಡೆಸಿತು. ವಿಚಾರಣೆ ಸಂದರ್ಭ ಸಿಬಿಎಸ್ಇ ಹಾಗೂ ಯುಜಿಸಿ ಹಾಜರಿತ್ತು.