ಕಾನೂನು ಶುಲ್ಕ ಪಾವತಿಸಲು ಆಭರಣ ಮಾರಿದ ಅನಿಲ್ ಅಂಬಾನಿ!
ಲಂಡನ್ : ಸಾಲದಲ್ಲಿ ಸಿಲುಕಿಕೊಂಡಿರುವ ಭಾರತದ ಉದ್ಯಮಿ ಅನಿಲ್ ಅಂಬಾನಿ ಇದೀಗ ಸರಳ ಜೀವನ ನಡೆಸುತ್ತಿದ್ದು, ಕಾನೂನು ಶುಲ್ಕವನ್ನು ಪಾವತಿಸುವ ಸಲುವಾಗಿ ತಮ್ಮ ಬಳಿ ಇದ್ದ ಎಲ್ಲ ಆಭರಣಗಳನ್ನು ಮಾರಾಟ ಮಾಡಿದ್ದಾಗಿ ಬ್ರಿಟನ್ ಕೋರ್ಟ್ಗೆ ತಿಳಿಸಿದ್ದಾರೆ.
"ನನ್ನ ಬಳಿ ಇದೀಗ ಬಳಕೆಗೆ ಒಂದು ಕಾರು ಮಾತ್ರ ಇದ್ದು, ಕಳೆದ ಜನವರಿಯಿಂದ ಜೂನ್ ನಡುವೆ ಎಲ್ಲ ಆಭರಣಗಳನ್ನು ಮಾರಾಟ ಮಾಡಿ 9.9 ಕೋಟಿ ರೂ. ಪಡೆದಿದ್ದೇನೆ. ಇದೀಗ ಮೌಲ್ಯಯುತವಾದ ಏನೂ ಉಳಿದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಹಲವು ವಿಲಾಸಿ ಕಾರುಗಳನ್ನು ಹೊಂದಿದ್ದಾರೆ ಎಂಬ ವರದಿಗಳ ಬಗ್ಗೆ ಕೇಳಿದಾಗ, "ಇವೆಲ್ಲ ಊಹಾತ್ಮಕ ಮಾಧ್ಯಮ ವರದಿಗಳು. ನನ್ನ ಬಳಿ ಎಂದೂ ರೋಲ್ಸ್ ರಾಯ್ಸ್ ಕಾರು ಇದ್ದಿರಲಿಲ್ಲ. ನಾನು ಇದೀಗ ಒಂದು ಕಾರನ್ನಷ್ಟೇ ಬಳಸುತ್ತಿದ್ದೇನೆ" ಎಂದು ಹೇಳಿದರು.
ಚೀನಾದ ಮೂರು ಬ್ಯಾಂಕ್ಗಳಿಗೆ 2020ರ ಜೂನ್ 12ರ ಒಳಗಾಗಿ ಬಾಕಿ ಇರುವ 5281 ಕೋಟಿ ರೂ. ಹಾಗೂ ಕಾನೂನು ವೆಚ್ಚವಾಗಿ 7 ಕೋಟಿ ರೂಪಾಯಿಗಳನ್ನು ಪಾವತಿಸುವಂತೆ ಬ್ರಿಟನ್ ಹೈಕೋರ್ಟ್ 2020ರ ಮೇ 22ರಂದು ಆದೇಶ ನೀಡಿತ್ತು. ಈ ಮೊತ್ತವನ್ನು ಪಾವತಿಸದ ಕಾರಣ ಚೀನಾದ ಬ್ಯಾಂಕ್ಗಳು ಅಂಬಾನಿ ಆಸ್ತಿಯ ವಿವರಣೆ ಕೋರಿದ್ದವು.
ಅಂಬಾನಿ ಭಾರತದಿಂದಲೇ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾದರು. ತಾಯಿಗೆ 500 ಕೋಟಿ ರೂ. ಹಾಗೂ ಮಗ ಅನುಮೋಲ್ಗೆ 310 ಕೋಟಿ ರೂ. ಸಾಲ ಪಾವತಿಸಬೇಕಾಗಿದೆ ಎಂದೂ ಅಂಬಾನಿ ವಿವರಿಸಿದರು.