ಮುಖ್ಯಮಂತ್ರಿ ಹುದ್ದೆಯಿಂದ ಆದಿತ್ಯನಾಥ್ ವಜಾಕ್ಕೆ ಪ್ರತಿಪಕ್ಷಗಳ ಆಗ್ರಹ
ಹೊಸದಿಲ್ಲಿ, ಅ. 2: ಹತ್ರಸ್ ನಲ್ಲಿ ದಲಿತ ಯುವತಿ ಸಾಮೂಹಿಕ ಅತ್ಯಾಚಾರಕ್ಕೊಳ ಗಾಗಿ ಸಾವನ್ನಪ್ಪಿದ ಪ್ರಕರಣವನ್ನು ಉತ್ತರಪ್ರದೇಶ ಪೊಲೀಸರು ನಿರ್ವಹಿಸಿದ ರೀತಿ ಹಾಗೂ ಮೃತದೇಹವನ್ನು ಕುಟುಂಬದ ಒಪ್ಪಿಗೆ ಇಲ್ಲದೆ ಅಂತ್ಯಕ್ರಿಯೆ ನಡೆಸಿರುವ ಕ್ರಮವನ್ನು ಖಂಡಿಸಿರುವ ಪ್ರತಿಪಕ್ಷಗಳು ಬಿಜೆಪಿ ನೇತೃತ್ವದ ಯೋಗಿ ಆದಿತ್ಯನಾಥ್ ಸರಕಾರವನ್ನು ವಜಾಗೊಳಿಸುವಂತೆ ಹಾಗೂ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವಂತೆ ಶುಕ್ರವಾರ ಆಗ್ರಹಿಸಿವೆ.
ಆದಿತ್ಯನಾಥ್ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಹಾಗೂ ಬಿಎಸ್ಪಿ ಆಗ್ರಹಿಸಿವೆ. ಇತರ ಪಕ್ಷಗಳು ಸಂತ್ರಸ್ತ ಯುವತಿಯ ಕುಟುಂಬವನ್ನು ಭೇಟಿಯಾಗಲು ಗುರುವಾರ ಹತ್ರಸ್ ಗೆ ತೆರಳುತ್ತಿದ್ದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ನಡೆಸಿಕೊಂಡ ರೀತಿಯನ್ನು ಖಂಡಿಸಿವೆ. ಬಿಎಸ್ಪಿ ವರಿಷ್ಠೆ ಹಾಗೂ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ, ಬಿಜೆಪಿ ಹೈಕಮಾಂಡ್ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ವಜಾಗೊಳಿಸಬೇಕು ಅಥವಾ ಉತ್ತರಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು, ಆದಿತ್ಯನಾಥ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಬೇಕು ಹಾಗೂ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಎಂದು ಗುರುವಾರ ಆಗ್ರಹಿಸಿದ್ದರು.