ಹತ್ರಸ್ ಕುಟುಂಬವನ್ನು ಭೇಟಿಯಾದ ಉತ್ತರಪ್ರದೇಶದ ಉನ್ನತ ಅಧಿಕಾರಿಗಳು
ಲಕ್ನೋ, ಅ. 3: ಉತ್ತರಪ್ರದೇಶದ ಉನ್ನತ ಅಧಿಕಾರಿಗಳು ಹತ್ರಸ್ ನ ಅತ್ಯಾಚಾರ ಹಾಗೂ ಹತ್ಯೆಗೊಳಗಾದ ಯುವತಿಯ ಕುಟುಂಬವನ್ನು ಶನಿವಾರ ಭೇಟಿ ಮಾಡಿದ್ದಾರೆ.
ಉತ್ತರಪ್ರದೇಶ ಪೊಲೀಸ್ನ ಡಿಜಿ ಎಚ್.ಸಿ. ಅವಸ್ಥಿ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಅವನೀಶ್ ಅವಸ್ಥಿ ಸಂತ್ರಸ್ತರ ಕುಟುಂಬವನ್ನು ಭೇಟಿಯಾಗಿದ್ದಾರೆ. ಹತ್ರಸ್ ಪ್ರಕರಣ ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ಇದೇ ರೀತಿಯ ಕ್ರೂರ ಅಪರಾಧಗಳ ಕುರಿತಂತೆ ಆದಿತ್ಯನಾಥ್ ಸರಕಾರದ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆ ಮೊದಲ ಬಾರಿಗೆ ಅಧಿಕಾರಿಗಳು ಹತ್ರಸ್ ನ ಸಂತ್ರಸ್ತ ಯುವತಿಯ ಕುಟುಂಬವನ್ನು ಭೇಟಿಯಾಗಿದ್ದಾರೆ. ಸಂತ್ರಸ್ತೆಯ ಕುಟುಂಬದ ಮನೆಯ ನೆಲದಲ್ಲಿ ಅಧಿಕಾರಿಗಳು ಕುಳಿತುಕೊಂಡಿರುವುದು.
ಗೃಹ ಕಾರ್ಯದರ್ಶಿ ಅವನೀಶ್ ಅವಸ್ಥಿ ಕುಟುಂಬಕ್ಕೆ ವಂದನೆ ಸಲ್ಲಿಸುತ್ತಿರುವುದು ಹಾಗೂ ಅಧಿಕಾರಿಗಳ ಸುತ್ತ ಪತ್ರಕರ್ತರು ಸೇರಿರುವುದು ವೀಡಿಯೊದಲ್ಲಿ ದಾಖಲಾಗಿದೆ. ಅಲಹಾಬಾದ್ ಉಚ್ಚ ನ್ಯಾಯಾಲಯ ಅಧಿಕಾರಿಗಳಿಗೆ ಸಮನ್ಸ್ ನೀಡಿದ ದಿನದ ಬಳಿಕ ಅಧಿಕಾರಿಗಳ ತಂಡ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಿದೆ.