ಅತ್ಯಾಚಾರ, ಹತ್ಯೆಗೀಡಾದ ಉನ್ನಾವೊ ಯುವತಿಯ ಸಹೋದರನ ಪುತ್ರ ನಾಪತ್ತೆ
ಉನ್ನಾವೊ (ಉತ್ತರಪ್ರದೇಶ) ಅ. 5: ಐವರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಡಿಸೆಂಬರ್ನಲ್ಲಿ ಪ್ರಕರಣದ ವಿಚಾರಣೆಗೆ ಹಾಜರಾಗಲು ನ್ಯಾಯಾಲಯಕ್ಕೆ ತೆರಳುತ್ತಿದ್ದ ಸಂದರ್ಭ ಆರೋಪಿಗಳಿಂದ ದಹನಕ್ಕೊಳಗಾಗಿ ಮೃತಪಟ್ಟ ಉನ್ನಾವೊದ ಯುವತಿಯ ಸಹೋದರನ 6 ವರ್ಷದ ಪುತ್ರ ಶುಕ್ರವಾರ ನಾಪತ್ತೆಯಾಗಿದ್ದಾನೆ.
ಬಿಹಾರದ ಗ್ರಾಮವೊಂದರಿಂದ ಬಾಲಕ ಶುಕ್ರವಾರ ನಾಪತ್ತೆಯಾಗಿದ್ದಾನೆ. ಇದುವರೆಗೆ ಪತ್ತೆಯಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ಸೋಮವಾರ ತಿಳಿಸಿದ್ದಾರೆ. ‘‘ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು 14 ಪೊಲೀಸರ ತಂಡವನ್ನು ನಿಯೋಜಿಸ ಲಾಗಿದೆ ಎಂದು ಉನ್ನಾವೊ ಪೊಲೀಸ್ ಅಧೀಕ್ಷಕ ಆನಂದ್ ಕುಲಕರ್ಣಿ ತಿಳಿಸಿದ್ದಾರೆ’’
ನಾಪತ್ತೆಯಾದ ಬಾಲಕ ಒಂದನೇ ತರಗತಿ ವಿದ್ಯಾರ್ಥಿ. ಈತ ಉನ್ನಾವೊದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಬಳಿಕ ಹತ್ಯೆಯಾದ 23 ವರ್ಷದ ಯುವತಿಯ ಸಹೋದರನ ಪುತ್ರ. ಲಕ್ನೊ ವಲಯ ಐಜಿ ಲಕ್ಷ್ಮೀ ಸಿಂಗ್ ರವಿವಾರ ಈ ಗ್ರಾಮಕ್ಕೆಭೇಟಿ ನೀಡಿ ಅಪಹರಣಕ್ಕೊಳಗಾದ ಬಾಲಕನ ಕುಟುಂಬದೊಂದಿಗೆ ಮಾತುಕತೆ ನಡೆಸಿದ್ದಾರೆ. ಎಲ್ಲ ರೀತಿಯ ನೆರವು ಒದಗಿಸುವುದಾಗಿ ಅವರು ಭರವಸೆ ನೀಡಿದ್ದಾರೆ.
ಈ ನಾಪತ್ತೆ ಪ್ರಕರಣದ ಶಂಕಿತರಲ್ಲಿ ಕ್ಯಾಪ್ಟನ್ ಬಾಜಪೈ, ಸರೋಜ್ ತ್ರಿವೇದಿ, ಅನಿತಾ ತ್ರಿವೇದಿ, ಸುಂದರ ಲೋಧಿ ಹಾಗೂ ಹರ್ಷಿತ್ ಬಾಜಪೈಯ ಹೆಸರು ಕೇಳಿ ಬಂದಿದೆ. ಇವರು ಉನ್ನಾವೊ ಯುವತಿಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಆರೋಪಿಗಳ ಸಂಬಂಧಿಕರು. ಎಂದು ಪೊಲೀಸರು ತಿಳಿಸಿದ್ದಾರೆ.