ಕೋವಿಡ್: ದೇಶದ 25 ಜಿಲ್ಲೆಗಳು ಭಯಾನಕ
ಹೊಸದಿಲ್ಲಿ, ಅ.7: ದೇಶದಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಪೈಕಿ ಶೇಕಡ 48ರಷ್ಟು ಮಂದಿ ಎಂಟು ರಾಜ್ಯಗಳ 25 ಜಿಲ್ಲೆಗಳ ರೋಗಿಗಳು. ಈ ಪೈಕಿ ಮಹಾರಾಷ್ಟ್ರದ 15 ಜಿಲ್ಲೆಗಳೂ ಸೇರಿವೆ ಎಂದು ಆರೋಗ್ಯ ಸಚಿವಾಲಯ ಪ್ರಕಟಿಸಿದೆ.
ಭಾರತದಲ್ಲಿ ಇದುವರೆಗೆ 56 ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಇದು ಗರಿಷ್ಠ ಪ್ರಮಾಣವಾಗಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಜನೀಶ್ ಭೂಷಣ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ವಿಶ್ವದಲ್ಲೇ ಗರಿಷ್ಠ ಸಂಖ್ಯೆಯ ತಪಾಸಣೆ ನಡೆಸಿದ ದೇಶಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದು, 8.10 ಕೋಟಿ ತಪಾಸಣೆ ನಡೆಸಲಾಗಿದೆ ಎಂದು ವಿವರಿಸಿದರು.
ಕಳೆದ ಎರಡು ವಾರದಿಂದೀಚೆಗೆ ದೇಶದಲ್ಲಿ ಗುಣಮುಖರಾಗುತ್ತಿರುವವರ ಸಂಖ್ಯೆ, ಹೊಸ ಪ್ರಕರಣಗಳ ಸಂಖ್ಯೆಗಿಂತ ಅಧಿಕವಾಗಿದೆ. ಕಳೆದ 14 ದಿನಗಳಿಂದ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿವೆ.
ಅತ್ಯಧಿಕ ಸಾವು ಸಂಭವಿಸಿದ 25 ಜಿಲ್ಲೆಗಳ ಪೈಕಿ 15 ಜಿಲ್ಲೆಗಳು ಮಹಾರಾಷ್ಟ್ರದ ಜಿಲ್ಲೆಗಳು. ಕರ್ನಾಟಕ, ಪಶ್ಚಿಮ ಬಂಗಾಳ ಹಾಗೂ ಗುಜರಾತ್ನ ತಲಾ ಎರಡು ಜಿಲ್ಲೆಗಳು, ತಮಿಳುನಾಡು, ಪಂಜಾಬ್, ಉತ್ತರ ಪ್ರದೇಶ ಮತ್ತು ಆಂಧ್ರ ಪ್ರದೇಶದ ತಲಾ ಒಂದು ಜಿಲ್ಲೆಗಳು ಇದರಲ್ಲಿ ಸೇರಿವೆ ಎಂದು ವಿವರಿಸಿದರು.
ದೇಶದಲ್ಲಿ ಪ್ರಕರಣಗಳ ಏರಿಕೆ ಪ್ರಮಾಣ ಸೆಪ್ಟಂಬರ್ 16-22ರ ಅವಧಿಯಲ್ಲಿ 9.21% ಇದ್ದುದು, ಸೆಪ್ಟಂಬರ್ 30-ಅಕ್ಟೋಬರ್ 6ರ ಅವಧಿಯಲ್ಲಿ 6.82ಕ್ಕೆ ಇಳಿದಿದೆ ಎಂದರು.
ಸರಾಸರಿ ದೈನಿಕ ಪ್ರಕರಣಗಳ ಸಂಖ್ಯೆ ಸೆಪ್ಟಂಬರ್ 2ರಿಂದ 8ರ ಅವಧಿಯಲ್ಲಿ 84,179 ಇದ್ದುದು, ಸೆಪ್ಟಂಬರ್ 30ರಿಂದ ಅಕ್ಟೋಬರ್ 6ರ ಅವಧಿಯಲ್ಲಿ 77,113ಕ್ಕೆ ಇಳಿದಿದೆ. ದೇಶದ ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ ಶೇಕಡ 77ರಷ್ಟು ಪ್ರಕರಣಗಳು ಮಹಾರಾಷ್ಟ್ರ, ಕರ್ನಾಟಕ, ಕೇರಳ, ಆಂಧ್ರ ಪ್ರದೇಶ, ತಮಿಳುನಾಡು, ಉತ್ತರ ಪ್ರದೇಶದಲ್ಲಿ ಇವೆ ಎಂದು ಅವರು ತಿಳಿಸಿದರು.