ಲಡಾಖ್ನಲ್ಲಿ ಬಂಧಿತ ಚೀನಿ ಸೈನಿಕನ ಬಿಡುಗಡೆ ಸದ್ಯಕ್ಕೆ ಇಲ್ಲ
ಹೊಸದಿಲ್ಲಿ,ಅ.20: ಪೂರ್ವ ಲಡಾಖ್ನ ಡೆಮ್ಚುಕ್ನಲ್ಲಿ ಸೋಮವಾರ ಭಾರತೀಯ ಸೇನೆಯು ವಶಕ್ಕೆ ತೆಗೆದುಕೊಂಡಿರುವ ಚೀನಿ ಸೈನಿಕನನ್ನು ಮುಂದಿನ ಕೆಲವು ದಿನಗಳ ಕಾಲ ಬಿಡುಗಡೆಗೊಳಿಸಲಾಗುವುದಿಲ್ಲ ಎಂದು ಬಲ್ಲ ಮೂಲಗಳು ಮಂಗಳವಾರ ತಿಳಿಸಿವೆ. ಕಾರ್ಪೊರೆಲ್ ವಾಂಗ್ ಯಾ ಲಾಂಗ್ನನ್ನು ಚೀನಾ ಕುರಿತ ತಜ್ಞರು ಪ್ರಶ್ನಿಸುತ್ತಿದ್ದು, ಅದು ಮುಗಿದ ಬಳಿಕ ಸ್ಥಾಪಿತ ಶಿಷ್ಟಾಚಾರಕ್ಕೆ ಅನುಗುಣವಾಗಿ ಆತನನ್ನು ಚೀನಿ ಸೇನೆಗೆ ಹಸ್ತಾಂತರಿಸಲಾಗುವುದು ಎಂದು ಈ ಮೂಲಗಳು ಹೇಳಿವೆ.
ವಾಸ್ತವ ನಿಯಂತ್ರಣ ರೇಖೆಯ ಭಾರತದ ಪಾರ್ಶ್ವದಲ್ಲಿ ಅಡ್ಡಾಡುತ್ತಿದ್ದ ಲಾಂಗ್ನನ್ನು ವಶಕ್ಕೆ ಪಡೆದಿರುವ ಭಾರತೀಯ ಸೇನೆಯು ಆತನಿಗೆ ಆಮ್ಲಜನಕ ಸೇರಿದಂತೆ ವೈದ್ಯಕೀಯ ನೆರವು,ಆಹಾರ ಮತ್ತು ಬೆಚ್ಚಗಿನ ಬಟ್ಟೆಗಳನ್ನು ಒದಗಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಲಾಂಗ್ನನ್ನು ವಶಕ್ಕೆ ಪಡೆದುಕೊಂಡಾಗ ಆತನ ಬಳಿ ನಾಗರಿಕ ಮತ್ತು ಮಿಲಿಟರಿ ದಾಖಲೆಗಳಿದ್ದವು ಎಂದು ಕೆಲವು ವರದಿಗಳು ತಿಳಿಸಿವೆ.
ಯಾಕ್ವೊಂದನ್ನು ಪತ್ತೆ ಹಚ್ಚಲು ಸ್ಥಳೀಯರಿಗೆ ನೆರವಾಗುತ್ತಿದ್ದ ಸಂದರ್ಭ ಲಾಂಗ್ ಕಳೆದುಹೋಗಿದ್ದ ಎಂದು ಸೋಮವಾರ ರಾತ್ರಿ ಹೇಳಿಕೆಯಲ್ಲಿ ತಿಳಿಸಿರುವ ಚೀನಿ ಸೇನೆಯ ವೆಸ್ಟರ್ನ್ ಥಿಯೇಟರ್ ಕಮಾಂಡ್ನ ವಕ್ತಾರ ಸೀನಿಯರ್ ಕರ್ನಲ್ ಝಾಂಗ್ ಶುಯಿಲಿ ಅವರು, ನಾಪತ್ತೆಯಾಗಿರುವ ಸೈನಿಕನನ್ನು ಸಾಧ್ಯವಾದಷ್ಟು ಶೀಘ್ರ ಹಸ್ತಾಂತರಿಸುವ ಮೂಲಕ ಭಾರತವು ತನ್ನ ಭರವಸೆಯನ್ನು ಈಡೇರಿಸುತ್ತದೆ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.