ಆಗ ಕೆಬಿಸಿ ವಿಜೇತ ಈಗ ಎಸ್ಪಿ!
ಫೋಟೊ ಕೃಪೆ: twitter.com/dr_rms
ಅಹ್ಮದಾಬಾದ್, ಅ. 23: 2001ರಲ್ಲಿ ಕೌನ್ ಬನೇಗಾ ಕರೋಡ್ ಪತಿ(ಕೆಬಿಸಿ) ಜೂನಿಯರ್ ಸ್ಪರ್ಧೆಯಲ್ಲಿ 15 ಪ್ರಶ್ನೆಗಳಿಗೆ ಸಲೀಸಾಗಿ ಉತ್ತರಿಸಿ 1 ಕೋಟಿ ರೂಪಾಯಿ ಪಡೆದುಕೊಂಡ 14 ವರ್ಷದ ರವಿ ಮೋಹನ್ ಸೈನಿಗೆ ಈಗ ಪ್ರಾಯ 33. ಅವರು ಈಗ ಗುಜರಾತ್ ಪೋರ್ಬಂದರ್ನ ಪೊಲೀಸ್ ಅಧೀಕ್ಷಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಎಂಬಿಬಿಎಸ್ ಪಡೆದುಕೊಂಡ ಸೈನಿ ಇಂಟರ್ರ್ನ್ಶಿಪ್ ಮುಗಿಸಿಕೊಂಡ ಬಳಿಕ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾದರು. 2014ರಲ್ಲಿ ಅವರು ಗುಜರಾತ್ ಕೇಡರ್ನ ಐಪಿಎಸ್ ಅಧಿಕಾರಿಯಾಗಿ ನೇಮಕರಾದರು. ರಾಜಸ್ಥಾನದ ಅಲ್ವಾರ್ನ ನಿವಾಸಿಯಾಗಿರುವ ಸೈನಿ ನಿವೃತ್ತ ಸೇನಾಧಿಕಾರಿಯ ಪುತ್ರ. ತಂದೆಯ ವೃತ್ತಿಯ ಕಾರಣಕ್ಕೆ ಸೈನಿ ತನ್ನ ಶಾಲಾ ವಿದ್ಯಾಭ್ಯಾಸವನ್ನು ಆಂಧ್ರಪ್ರದೇಶದ ವಿಶಾಖಪಟ್ಟಣಂನ ನೇವಲ್ ಪಬ್ಲಿಕ್ ಶಾಲೆಯಲ್ಲಿ ಪೂರ್ಣಗೊಳಿಸಿದರು.
10ನೇ ತರಗತಿ ವಿದ್ಯಾರ್ಥಿಯಾಗಿದ್ದಾಗ ಅವರು ಬ್ರಿಟಿಷ್ ಕಾರ್ಯಕ್ರಮದ ಭಾರತೀಯ ಆವೃತ್ತಿಯಾದ 'ಕೌನ್ ಬನೇಗಾ ಕರೋಡ್ ಪತಿ' ಜೂನಿಯರ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 2001ರಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ನಡೆಸಿ ಕೊಟ್ಟ ‘ಕೌನ್ ಬನೇಗಾ ಕರೋಡ್ ಪತಿ’ಸ್ಪರ್ಧೆಯಲ್ಲಿ 15 ಪ್ರಶ್ನೆಗಳಿಗೆ ಉತ್ತರಿಸಿ ಜಯ ಗಳಿಸಿದ ಏಕೈಕೆ ಸ್ಪರ್ಧಿ ಸೈನಿ. ಅವರು ಈ ಸ್ಪರ್ಧೆಯಲ್ಲಿ 1 ಕೋಟಿ ರೂಪಾಯಿ ಗಳಿಸಿದ್ದರು.