"ಚೀನಾ ಮತ್ತು ಪಾಕಿಸ್ತಾನದೊಂದಿಗೆ ಯಾವಾಗ ಯುದ್ಧ ಮಾಡಬೇಕೆಂದು ಪ್ರಧಾನಿ ನಿರ್ಧರಿಸಿದ್ದಾರೆ"
ವಿವಾದಾತ್ಮಕ ಹೇಳಿಕೆ ನೀಡಿದ ಉ.ಪ್ರ. ಬಿಜೆಪಿ ಮುಖ್ಯಸ್ಥ
ಸ್ವತಂತ್ರ ದೇವ್ ಸಿಂಗ್ (Photo: facebook)
ಬಲ್ಲಿಯಾ: ಚೀನಾ ಮತ್ತು ಪಾಕಿಸ್ತಾನದ ವಿರುದ್ಧ ದೇಶ ಯಾವಾಗ ಯುದ್ಧ ಮಾಡುತ್ತದೆ ಎಂದು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ ಎಂದು ಉತ್ತರ ಪ್ರದೇಶದ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರಾಮ ಮಂದಿರ ಮತ್ತು 370 ವಿಧಿ ರದ್ದತಿ ನಿರ್ಧಾರದಂತೆ ಯಾವಾಗ ಪಾಕಿಸ್ತಾನ ಮತ್ತು ಚೀನಾದೊಂದಿಗೆ ಯುದ್ಧ ಮಾಡಬೇಕು ಎಂಬುವುದನ್ನು ಪ್ರಧಾನಿ ಮೋದಿಯವರು ನಿರ್ಧರಿಸಿದ್ದಾರೆ ಎಂದು ಸ್ವತಂತ್ರ ದೇವ್ ಅವರು ಹೇಳುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಜೆಪಿ ಶಾಸಕ ಸಂಜಯ್ ಯಾದವ್ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತಿದ್ದರು. ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ್ ಪಕ್ಷದ ಕಾರ್ಯಕರ್ತರನ್ನು ‘ಭಯೋತ್ಪಾದಕರು’ ಎಂದೂ ಸಿಂಗ್ ಅವರು ಹೇಳಿದ್ದಾರೆ.
ಬಿಜೆಪಿ ಮುಖ್ಯಸ್ಥನ ವಿವಾದಾತ್ಮಕ ಹೇಳಿಕೆ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಸ್ಥಳೀಯ ಸಂಸದ ರವೀಂದ್ರ ಕುಶ್ವಾರ, ಸಿಂಗ್ ಅವರು ಪಕ್ಷದ ಕಾರ್ಯಕರ್ತರಿಗೆ ಸ್ಥೈರ್ಯ ತುಂಬಲು ಹೇಳಿದ್ದಾರೆ ಎಂದು ಸಂಸದ ಸಮರ್ಥಿಸಿದ್ದಾರೆ.
Next Story