ಕೋವಿಶೀಲ್ಡ್: 3ನೇ ಹಂತದ ಪ್ರಯೋಗಕ್ಕೆ ನೋಂದಣಿ ಪೂರ್ಣ
ಹೊಸದಿಲ್ಲಿ, ನ. 12: ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯ ಅಭಿವೃದ್ಧಿ ಪಡಿಸಿರುವ ಕೋವಿಶೀಲ್ಡ್ ಲಸಿಕೆಯ ಮೂರನೇ ಹಂತದ ಪ್ರಯೋಗವನ್ನು ಭಾರತದಲ್ಲಿ ನಡೆಸಲು ದಾಖಲಾತಿ ಪೂರ್ಣಗೊಳಿಸಿರುವುದಾಗಿ ಪುಣೆಯ ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಹಾಗೂ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಬುಧವಾರ ಪ್ರಕಟಿಸಿದೆ.
ಪ್ರಸ್ತುತ ಎಸ್ಐಐ ಹಾಗೂ ಐಸಿಎಂಆರ್ ದೇಶಾದ್ಯಂತ 15 ಕಡೆಗಳಲ್ಲಿ ಕೋವಿಶೀಲ್ಡ್ನ ಎರಡನೇ ಹಂತದ ಕ್ಲಿನಿಕಲ್ ಟ್ರಯಲ್ ಅನ್ನು ಪೂರ್ಣಗೊಳಿಸಿದೆ. ಮುಂದಿನ ಪ್ರಯೋಗಕ್ಕಾಗಿ 1,600 ಮಂದಿ ಅಕ್ಟೋಬರ್ 31ರಂದು ನೋಂದಣಿ ಮಾಡಿಸಿಕೊಳ್ಳಲಾಗಿದೆ. ಇದುವರೆಗಿನ ಕೋವಿಶೀಲ್ಡ್ ಪರೀಕ್ಷೆಯ ಪ್ರಯೋಗ ಪರಿಣಾಮಕಾರಿಯಾಗಿದ್ದು, ಭರವಸೆಯ ಫಲಿತಾಂಶ ನೀಡಿದೆ. ಇದು ಕೋರೋನ ಸೋಂಕನ್ನು ಗುಣಪಡಿಸುವಲ್ಲಿ ವಾಸ್ತವದ ಪರಿಹಾರವಾಗಿರಲಿದೆ. ಈ ಲಸಿಕೆ ಭಾರತದಲ್ಲಿ ಮಾನವನ ಮೇಲೆ ಪ್ರಯೋಗಿಸಲಾದ ಇದುವರೆಗಿನ ಅತಿ ಸುಧಾರಿತ ಲಸಿಕೆ ಎಂದು ಐಸಿಎಂಆರ್ ಹೇಳಿದೆ. ‘‘ಕೊರೋನದ ವಿರುದ್ಧದ ಭಾರತದ ಹೋರಾಟದಲ್ಲಿ ಐಸಿಎಂಆರ್ ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದೆ’’ ಎಂದು ಎಸ್ಐಐಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಡಾರ್ ಪೂನಾವಲ್ಲಾ ಹೇಳಿದ್ದಾರೆ.