ಹಾಡಹಗಲೇ ವೈದ್ಯೆಯ ಭೀಕರ ಕೊಲೆ
ಆಗ್ರಾ: ಸೆಟ್ಟಾಪ್ ಬಾಕ್ಸ್ಗೆ ರೀ ಚಾರ್ಜ್ ಮಾಡುವ ನೆಪದಲ್ಲಿ ಮನೆಯೊಳಗೆ ಪ್ರವೇಶಿಸಿದ ದುಷ್ಕರ್ಮಿಯೊಬ್ಬ 38 ವರ್ಷದ ದಂತವೈದ್ಯೆಯನ್ನು ಭೀಕರವಾಗಿ ಹತ್ಯೆಗೈದಿರುವ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಅತ್ಯಂತ ಭೀಕರ ಹಾಗೂ ಘೋರ ಅಪರಾಧವೊಂದರಲ್ಲಿ ದುಷ್ಕರ್ಮಿಯು ಡಾ. ನಿಶಾ ಸಿಂಘಾಲ್ ಅವರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಲ್ಲದೆ ಅವರ ಗಂಟಲು ಕತ್ತರಿಸಿದ್ದಾನೆ. ನಿಶಾ ಅವರ ಇಬ್ಬರು ಮಕ್ಕಳು ಮನೆಯ ಮತ್ತೊಂದು ಕೋಣೆಯಲ್ಲಿದ್ದರು. ಪಾತಕಿಯು 8 ಹಾಗೂ 4 ವರ್ಷದ ಮಕ್ಕಳ ಮೇಲೂ ಹಲ್ಲೆ ನಡೆಸಲು ಮುಂದಾಗಿದ್ದು, ಇಬ್ಬರು ಮಕ್ಕಳು ಬದುಕುಳಿದಿದ್ದಾರೆ. ನಿಶಾ ಅವರ ಪತಿ ಅಜಯ್ ಸಿಂಘಾಲ್ ಶಸ್ತ್ರಚಿಕಿತ್ಸಕರಾಗಿದ್ದು, ತನ್ನ ಪತ್ನಿಯ ಮೇಲೆ ದಾಳಿ ನಡೆದ ಸುದ್ದಿ ಕೇಳಿ ಆಸ್ಪತ್ರೆಯಿಂದ ಮನೆಗೆ ಧಾವಿಸಿ ಬಂದು ನಿಶಾರನ್ನು ಆಸ್ಪತ್ರೆಗೆ ಕರೆದೊಯ್ದರು.ಅಲ್ಲಿ ನಿಶಾ ಅವರು ತೀವ್ರ ಗಾಯದಿಂದಾಗಿ ಮೃತಪಟ್ಟಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳಿಂದ ಆರೋಪಿ ಶುಭಮ್ ಪಾಠಕ್ನ ಗುರುತು ಪತ್ತೆ ಹಚ್ಚಲಾಗಿದ್ದು, ಇಂದು ಬೆಳಗ್ಗೆ ಆತನನ್ನು ಬಂಧಿಸಲಾಗಿದೆ.
ಕೇಬಲ್ ಟಿವಿ ಕೆಲಸಗಾರನಂತೆ ನಟಿಸಿ ಸಿಂಘಾಲ್ ಮನೆ ಪ್ರವೇಶಿಸಿದ್ದ ಆರೋಪಿ ದರೋಡೆಗೆ ಹೊಂಚುಹಾಕಿದ್ದ ನೆಂದು ಪೊಲೀಸರು ತಿಳಿಸಿದ್ದಾರೆ.