ದೇಶದಲ್ಲಿ ಜೂನ್ ನಂತರ ಅತಿ ಕಡಿಮೆ ಕೊರೊನ ಸೋಂಕು ಪ್ರಕರಣ ದಾಖಲು
ಹೊಸದಿಲ್ಲಿ, ಜ. 5: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 16,375 ಹೊಸ ಕೊರೋನ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಜೂನ್ 25 (16,922)ರ ಬಳಿಕ ದೇಶದಲ್ಲಿ ಅತಿ ಕಡಿಮೆ ಕೊರೋನ ಸೋಂಕಿನ ಪ್ರಕರಣಗಳು ದಾಖಲಾದಂತಾಗಿದೆ.
ರೂಪಾಂತರಿತ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ 58ಕ್ಕೆ ಏರಿಕೆಯಾಗಿದೆ. ಕೊರೋನ ಸ್ವಾಬ್ಗಳ ಜಿನೋಮ್ ಪರೀಕ್ಷೆ ನಡೆಸುವ 10 ಪ್ರಯೋಗಾಲಯಗಳಲ್ಲಿ ಒಂದಾಗಿರುವ ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ 20 ಹೊಸ ಪ್ರಕರಣಗಳು ಪತ್ತೆಯಾಗಿರುವುದು ಇದರಲ್ಲಿ ಸೇರಿದೆ ಎಂದು ಕೇಂದ್ರ ಸರಕಾರ ಹೇಳಿದೆ.
ಕೊರೋನ ಸೋಂಕಿನ ಪ್ರಕರಣಗಳ ಒಟ್ಟು ಸಂಖ್ಯೆ 1,03,56,844ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 201 ಕೊರೋನ ಸೋಂಕಿತರು ಸಾವನ್ನಪ್ಪುವ ಮೂಲಕ ಕೊರೋನ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1.49 ಲಕ್ಷಕ್ಕೆ ಏರಿಕೆಯಾಗಿದೆ.
ಹೊಸ ಪ್ರಕರಣಗಳಿಗಿಂತ ಸರಿಸುಮಾರು ದ್ವಿಗುಣ ಅಂದರೆ, 29,000 ಕೊರೋನ ಸೋಂಕಿತರು ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2.31 ಲಕ್ಷ ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ.