ಪ್ರೇಯಸಿಯನ್ನು ಕೊಂದು ಬೆಡ್ ರೂಮಿನ ಗೋಡೆಯೊಳಗೆ ಶವ ಮುಚ್ಚಿಟ್ಟ ಪ್ರೇಮಿ!
ಕೊನೆಗೂ ಪ್ರಕರಣ ಭೇದಿಸಿ ಆರೋಪಿಯ ಸೆರೆ ಹಿಡಿದ ಮುಂಬೈ ಪೊಲೀಸರು
ಮುಂಬೈ: ತನ್ನ ಪ್ರೇಯಸಿಯನ್ನು ಹತ್ಯೆಗೈದು ತನ್ನ ಪ್ಲ್ಯಾಟ್ ನ ಗೋಡೆಯಲ್ಲಿ ಮುಚ್ಚಿಟ್ಟಿದ್ದ ಆರೋಪದಲ್ಲಿ 30ರ ಹರೆಯದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ಶನಿವಾರ ತಿಳಿಸಿದ್ದಾರೆ.
ತನ್ನ ಪ್ರೇಯಸಿ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಾಳೆಂಬ ಕಾರಣಕ್ಕೆ ಪ್ರೇಮಿಯೊಬ್ಬ ಆಕೆಯನ್ನು ಕೊಲೆ ಮಾಡಿ ಗೋಡೆಯೊಳಗೆ ಹುದುಗಿಸಿಟ್ಟಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ.
ಯುವಕನು 32 ವರ್ಷದ ಯುವತಿಯನ್ನು 5 ವರ್ಷಗಳಿಂದ ಪ್ರೀತಿಸುತ್ತಿದ್ದ. ಆದರೆ, ಯುವಕನ ಮನೆಯಲ್ಲಿ ಇವರಿಬ್ಬರ ಪ್ರೀತಿ ಇಷ್ಟವಿರಲಿಲ್ಲ. ಆದರೆ ಯುವತಿ ತನ್ನನ್ನು ಮದುವೆಯಾಗುವಂತೆ ಯುವಕನನ್ನು ಒತ್ತಾಯಿಸುತ್ತಿದ್ದಳು. ಇದರಿಂದ ಕೋಪಗೊಂಡ ಆ ಯುವಕ ಕಳೆದ ವರ್ಷ ಅಕ್ಟೋಬರ್ ನಲ್ಲಿ ಆಕೆಯನ್ನು ಕೊಲೆ ಮಾಡಿದ್ದ. ಯುವತಿಯ ಅಸ್ಥಿ ಪಂಜರ ಈಗ ಯುವಕನ ಪ್ಲ್ಯಾಟ್ ನ ಗೋಡೆಯಲ್ಲಿ ಪತ್ತೆಯಾಗಿದೆ.
ಯುವತಿಯ ಮನೆಯವರು ಯುವತಿ ಎಲ್ಲಿದ್ದಾಳೆ ಎಂದು ಕೇಳಿದಾಗ, ಆಕೆ ಗುಜರಾತ್ ನ ವಾಪಿಯಲ್ಲಿ ಕೆಲಸ ಮಾಡುತ್ತಿದ್ದಾಳೆ ಎಂದು ಯುವಕ ಸುಳ್ಳು ಹೇಳಿದ್ದ. 2020ರ ಅಕ್ಟೋಬರ್ ನಿಂದ ಯುವತಿ ಆಕೆಯ ಮನೆಯವರ ಸಂಪರ್ಕಕ್ಕೆ ಸಿಗದಿರುವುದರಿಂದ ಅನುಮಾನ ಗೊಂಡು ಯುವತಿಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು.
ಮೊದಲ ಬಾರಿ ತನಿಖೆ ಮಾಡಿದಾಗ ತನಗೇನೂ ಗೊತ್ತಿಲ್ಲ ಎಂದು ವಾದಿಸಿದ್ದ. ಆತ ವಾಸಿಸುತ್ತಿದ್ದ ಮನೆಯನ್ನು ಪರಿಶೀಲಿಸಿದಾಗ ಏನೂ ಪತ್ತೆಯಾಗಿರಲಿಲ್ಲ. ಆದರೆ ಯುವತಿಯು ಯುವಕನೊಂದಿಗೆ ಅಕ್ಟೋಬರ್ 21ರಂದು ಕೊನೆಯ ಬಾರಿ ಕಾಣಿಸಿಕೊಂಡಿದ್ದಕ್ಕೆ ಸಾಕ್ಷಿ ಲಭಿಸಿತ್ತು. ಹೀಗಾಗಿ ಆತನ ಮೇಲೆ ಅನುಮಾನ ಹಾಗೆಯೇ ಇತ್ತು. ಮತ್ತೊಮ್ಮೆ ಆತನ ಮನೆಯನ್ನು ಪೊಲೀಸರು ಪರಿಶೀಲಿಸಿದಾಗ ಬೆಡ್ ರೂಮ್ ನ ಗೋಡೆಯಲ್ಲಿ ಪ್ರೇಯಸಿಯ ಶವ ಹೂತ್ತಿಟ್ಟಿರುವ ವಿಷಯ ಗೊತ್ತಾಗಿತ್ತು. ಗೋಡೆ ಒಡೆಸಿ ನೋಡಿದಾಗ ಯುವತಿಯ ಅಸ್ಥಿಪಂಜರ ಪತ್ತೆಯಾಗಿತ್ತು.
ಆರೋಪಿಯ ವಿರುದ್ದ ಐಪಿಸಿಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಲಾಗಿದೆ.