ಬಾಲಕಿಯ ಮೇಲೆ ಐದು ದಿನಗಳಲ್ಲಿ ಎರಡು ಬಾರಿ ಸಾಮೂಹಿಕ ಅತ್ಯಾಚಾರ
ಮಧ್ಯಪ್ರದೇಶದಲ್ಲಿ ತಲೆ ತಗ್ಗಿಸುವ ಘಟನೆ
ಭೋಪಾಲ, ಜ.17: ಮಧ್ಯಪ್ರದೇಶದ ಉಮಾರಿಯಾ ಜಿಲ್ಲೆಯಲ್ಲಿ 13 ವರ್ಷದ ಬಾಲಕಿಯ ಮೇಲೆ ಹಲವು ಬಾರಿ ಅತ್ಯಾಚಾರ ನಡೆದ ಪ್ರಕರಣಕ್ಕೆ ಸಂಬಂಧಿಸಿ 7 ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಬಾಲಕಿಗೆ ಪರಿಚಯವಿದ್ದ ವ್ಯಕ್ತಿಯೊಬ್ಬ ಜನವರಿ 4ರಂದು ಆಕೆಯನ್ನು ಅಪಹರಿಸಿ, ತನ್ನ 6 ಮಿತ್ರರೊಂದಿಗೆ 2 ದಿನ ಸಾಮೂಹಿಕ ಅತ್ಯಾಚಾರ ಎಸಗಿದ ಬಳಿಕ, ವಿಷಯ ಯಾರಲ್ಲಾದರೂ ಬಾಯಿಬಿಟ್ಟರೆ ಕೊಲ್ಲುವುದಾಗಿ ಎಚ್ಚರಿಸಿ ಬಿಡುಗಡೆಗೊಳಿಸಿದ್ದಾನೆ. 6 ದಿನದ ಬಳಿಕ ಬಾಲಕಿಯನ್ನು ಮತ್ತೆ ಅಪಹರಿಸಲಾಗಿದೆ. ಜನವರಿ 4ರಂದು ಅತ್ಯಾಚಾರ ಎಸಗಿದ್ದ ಆರೋಪಿಗಳಲ್ಲಿ ಒಬ್ಬ ಈ ಬಾರಿ ಅಪಹರಿಸಿ ಸಮೀಪದ ಅರಣ್ಯದಲ್ಲಿ ಹಾಗೂ ರಸ್ತೆ ಬದಿಯ ಡಾಬಾದಲ್ಲಿ ಇರಿಸಿ, ಇತರ ಇಬ್ಬರೊಂದಿಗೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ಆಕೆಯನ್ನು ರಸ್ತೆ ಬದಿ ಬಿಟ್ಟು ಪರಾರಿಯಾಗಿದ್ದಾನೆ. ತೀವ್ರ ನಿತ್ರಾಣಗೊಂಡಿದ್ದ ಬಾಲಕಿ ಟ್ರಕ್ ಚಾಲಕರಲ್ಲಿ ಸಹಾಯ ಕೇಳಿದಾಗ ಸಹಾಯ ಮಾಡುವ ಭರವಸೆ ನೀಡಿದ ಇಬ್ಬರು ಟ್ರಕ್ ಚಾಲಕರು ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕಡೆಗೂ ಅವರಿಂದ ತಪ್ಪಿಸಿಕೊಂಡ ಬಾಲಕಿ ಮನೆಗೆ ತೆರಳಿ ಮಾಹಿತಿ ನೀಡಿದ್ದು ಪೋಷಕರು ಕತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡು ಇದುವರೆಗೆ 7 ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳನ್ನೂ ಶೀಘ್ರ ಬಂಧಿಸಲಾಗುವುದು ಎಂದು ಕತ್ನಿ ಪೊಲೀಸ್ ಅಧೀಕ್ಷಕ ವಿಕಾಸ್ ಕುಮಾರ್ ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ಕಳೆದ 1 ವಾರದಲ್ಲಿ ನಡೆದಿರುವ 4ನೇ ಅತ್ಯಾಚಾರ ಘಟನೆ ಇದಾಗಿದೆ.