ಕೋವಿಡ್ ಲಸಿಕೆ ಪಡೆದ 51 ಮಂದಿಗೆ ಅಡ್ಡಪರಿಣಾಮ: ದಿಲ್ಲಿ ಆರೋಗ್ಯ ಸಚಿವ
ಹೊಸದಿಲ್ಲಿ, ಜ.17: ದಿಲ್ಲಿಯಲ್ಲಿ ಶನಿವಾರ ಕೊರೋನ ಲಸಿಕೆ ಪಡೆದವರಲ್ಲಿ ಅಡ್ಡಪರಿಣಾಮದ 51 ಪ್ರಕರಣ ವರದಿಯಾಗಿದೆ. ಜೊತೆಗೆ ಒಂದು ಪ್ರಕರಣ ಗಂಭೀರವಾಗಿದ್ದು, ಅವರನ್ನು ಅಖಿಲಭಾರತ ವೈದ್ಯವಿಜ್ಞಾನ ಸಂಸ್ಥೆ(ಎಐಐಎಂಎಸ್)ಗೆ ದಾಖಲಿಸಲಾಗಿದೆ ಎಂದು ದಿಲ್ಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ರವಿವಾರ ಹೇಳಿದ್ದಾರೆ.
ದಿಲ್ಲಿಯಲ್ಲಿ ಸಣ್ಣಪುಟ್ಟ ಅಡ್ಡಪರಿಣಾಮದ 51 ಪ್ರಕರಣ ವರದಿಯಾಗಿದೆ. ಲಸಿಕೆ ಪಡೆದು ಸ್ವಲ್ಪ ಅಸ್ವಸ್ಥರಾದ ಅವರನ್ನು ವೈದ್ಯಕೀಯ ತಂಡದ ನಿಗಾದಲ್ಲಿ ಇರಿಸಿದ ಬಳಿಕ ಅವರು ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ. ಆದರೆ ಎಐಐಎಂಎಸ್ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿರುವ 22 ವರ್ಷದ ವ್ಯಕ್ತಿ ತೀವ್ರ ಅಸ್ವಸ್ಥನಾದ ಹಿನ್ನೆಲೆಯಲ್ಲಿ ಆತನನ್ನು ಆಸ್ಪತ್ರೆಯ ತೀವ್ರನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಆತನ ಆರೋಗ್ಯಸ್ಥಿತಿ ಈಗ ಸ್ಥಿರವಾಗಿದೆ ಎಂದು ಆಸ್ಪತ್ರೆಯವರು ಮಾಹಿತಿ ನೀಡಿರುವುದಾಗಿ ಸಚಿವರು ಹೇಳಿದ್ದಾರೆ. ದಿಲ್ಲಿಯಲ್ಲಿ ಶನಿವಾರ 4,000ಕ್ಕೂ ಅಧಿಕ ಆರೋಗ್ಯಕ್ಷೇತ್ರದ ಸಿಬ್ಬಂದಿಗಳಿಗೆ ಲಸಿಕೆ ನೀಡಲಾಗಿದೆ. ಎಐಐಎಂಎಸ್ ಹಾಗೂ ಇತರ 6 ಕೇಂದ್ರ ಸರಕಾರದ ಅಧೀನದ ಆಸ್ಪತ್ರೆ ಹೊರತುಪಡಿಸಿ, ಉಳಿದೆಲ್ಲ ಸಂಸ್ಥೆಯವರಿಗೆ ಸೆರಮ್ ಸಂಸ್ಥೆಯ ಕೋವಿಶೀಲ್ಡ್ ಲಸಿಕೆ ನೀಡಲಾಗಿದೆ. ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್ ಲಸಿಕೆ ಇನ್ನೂ ಪ್ರಯೋಗ ಹಂತದಲ್ಲಿರುವುದರಿಂದ ಲಸಿಕೆ ಪಡೆದವರ ಮೇಲೆ ನಿರಂತರ ನಿಗಾ ಇರಿಸಲಾಗುತ್ತದೆ ಎಂದು ದೇಶದ ಔಷಧ ನಿಯಂತ್ರಕ ಸಂಸ್ಥೆ ಐಸಿಎಂಆರ್ ಹೇಳಿದೆ.
ಲಸಿಕೆ ಪಡೆದ ಬಳಿಕ ಉಂಟಾಗುವ ಅಡ್ಡ ಪರಿಣಾಮವು ‘ಲಸಿಕೆಯ ಬಳಕೆಯೊಂದಿಗೆ ಸಾಂದರ್ಭಿಕ ಸಂಬಂಧವನ್ನು ಹೊಂದಿರದ ಯಾವುದೇ ಅಹಿತಕರ ವೈದ್ಯಕೀಯ ಘಟನೆಯಾಗಿದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆ ವ್ಯಾಖ್ಯಾನಿಸಿದೆ.