ಮೊಯಿನ್ ಅಲಿ ಈ ಸಾಧನೆ ಮಾಡಿದ ಮೊದಲ ಸ್ಪಿನ್ನರ್
ಕೊಹ್ಲಿ ರನ್ ಖಾತೆ ತೆರೆಯುವ ಮೊದಲೇ ಪೆವಿಲಿಯನ್ ಗೆ ಕಳುಹಿಸಿದ ಇಂಗ್ಲೆಂಡ್ ಆಟಗಾರ
ಚೆನ್ನೈ: ಇಂಗ್ಲೆಂಡ್ ನ ಮೊಯಿನ್ ಅಲಿ ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯವರನ್ನು ಟೆಸ್ಟ್ ಕ್ರಿಕೆಟ್ ನಲ್ಲಿ ಶೂನ್ಯಕ್ಕೆ ಔಟ್ ಮಾಡಿರುವ ಮೊದಲ ಸ್ಪಿನ್ನರ್ ಎಂಬ ಸಾಧನೆಗೆ ಪಾತ್ರರಾಗಿದ್ದಾರೆ.
ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಶನಿವಾರ ಆರಂಭವಾದ ದ್ವಿತೀಯ ಟೆಸ್ಟ್ ನ ಮೊದಲ ಅವಧಿಯಲ್ಲಿ ಆಫ್ ಸ್ಪಿನ್ನರ್ ಅಲಿ ಅವರು ವಿರಾಟ್ ಕೊಹ್ಲಿ(0)ಖಾತೆ ತೆರೆಯುವ ಮೊದಲೇ ಪೆವಿಲಿಯನ್ ಗೆ ಕಳುಹಿಸಿದರು.
ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 11ನೇ ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.
ಜೇಮ್ಸ್ ಆ್ಯಂಡರ್ಸನ್, ಸ್ಟುವರ್ಟ್ ಬ್ರಾಡ್, ಪ್ಯಾಟ್ ಕಮಿನ್ಸ್, ಬೆನ್ ಹಿಲ್ಫನಾಸ್, ಮಿಚೆಲ್ ಸ್ಟಾರ್ಕ್, ಸುರಂಗ ಲಕ್ಮಲ್, ಅಬು ಜಾಯೆದ್, ಲಿಯಾಮ್ ಪ್ಲಂಕೆಟ್, ರವಿ ರಾಂಪಾಲ್ ಹಾಗೂ ಕೆಮರ್ ರೋಚ್ ಟೆಸ್ಟ್ ನಲ್ಲಿ ಕೊಹ್ಲಿಯವರನ್ನು ಶೂನ್ಯಕ್ಕೆ ಔಟ್ ಮಾಡಿರುವ ಇತರ 10 ಮಂದಿ ಬೌಲರ್ ಗಳಾಗಿದ್ದಾರೆ.
ಭಾರತ ಮೊದಲ ದಿನದಾಟದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ ಬರೋಬ್ಬರಿ 300 ರನ್ ಗಳಿಸಿದ್ದು, ಮೊಯಿನ್ ಅಲಿ ಒಟ್ಟು 26 ಓವರ್ ಗಳಲ್ಲಿ 112 ರನ್ ನೀಡಿ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ವಿಕೆಟ್ ಗಳನ್ನು ಪಡೆದರು.