ಉತ್ತರಪ್ರದೇಶ: ಮಗುವಿಗೆ ಜನ್ಮ ನೀಡಿದ ಅತ್ಯಾಚಾರ ಸಂತ್ರಸ್ತೆ
ಚಿತ್ರಕೂಟ್ (ಉತ್ತರಪ್ರದೇಶ), ಫೆ. 19: ಅತ್ಯಾಚಾರಕ್ಕೊಳಗಾದ 13 ವರ್ಷದ ಬಾಲಕಿಯೋರ್ವಳು ಉತ್ತರಪ್ರದೇಶದ ಚಿತ್ರಕೂಟ್ನ ಆಸ್ಪತ್ರೆಯೊಂದರಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ, ಹೆರಿಗೆಯಾದ ಕೂಡಲೇ ಮಗು ಮೃತಪಟ್ಟಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು 29 ವರ್ಷದ ಯುವಕ ಕಳೆದ ವರ್ಷ ನಿರಂತರ ಅತ್ಯಾಚಾರ ಎಸಗಿದ್ದ. ಕುಟುಂಬದ ದೂರಿನ ಆಧಾರದಲ್ಲಿ ಪೊಲೀಸರು ಫೆಬ್ರವರಿ 7ರಂದು ಎಫ್ಐಆರ್ ದಾಖಲಿಸಿದ್ದರು. ಅಲ್ಲದೆ ಆರೋಪಿ ಸಿಕಂದರ್ ಆಲಿಯಾಸ್ ಅಮರನಾಥ್ ತಿವಾರಿಯನ್ನು ಬಂಧಿಸಿದ್ದರು. 7ನೇ ತರಗತಿ ವಿದ್ಯಾರ್ಥಿನಿಯನ್ನು ಆರೋಪಿ ಅಮರ್ನಾಥ್ ತಿವಾರಿ ಕಳೆದ ವರ್ಷ ಆಗಸ್ಟ್ 15ರಂದು ಮನೆಗೆ ಕರೆಸಿಕೊಂಡಿದ್ದ ಹಾಗೂ ಅತ್ಯಾಚಾರ ಎಸಗಿದ್ದ. ಅಲ್ಲದೆ, ಈ ವಿಷಯವನ್ನು ಬಹಿರಂಗಪಡಿಸದಂತೆ ಬೆದರಿಕೆ ಒಡ್ಡಿದ್ದ ಎಂದು ಪೊಲೀಸರು ಹೇಳಿದ್ದಾರೆ. ನವಜಾತ ಶಿಶುವಿನ ಮರಣೋತ್ತರ ಹಾಗೂ ಡಿಎನ್ಎ ವರದಿಗಾಗಿ ನಾವು ಕಾಯುತ್ತಿದ್ದೇವೆ. ಅದು ದೊರಕಿದ ಬಳಿಕ ಮುಂದಿನ ಕ್ರಮಗಳನ್ನು ಕೈಗೊಳ್ಳಲಿದ್ದೇವೆ ಎಂದು ಪೊಲೀಸರು ತಿಳಿಸಲಿದ್ದಾರೆ.