ಯುವತಿಯ ಅಪಹರಣ ಮತ್ತು ಅತ್ಯಾಚಾರ: ಬಿಜೆಪಿ ಮುಖಂಡ ಸಹಿತ ನಾಲ್ವರ ವಿರುದ್ಧ ಪ್ರಕರಣ ದಾಖಲು
ಭೋಪಾಲ್: ಮಧ್ಯಪ್ರದೇಶದ ಶಾದೋಲ್ ಜಿಲ್ಲೆಯಲ್ಲಿ 20 ವರ್ಷದ ಯುವತಿಯೊಬ್ಬಬ್ಬಳನ್ನು ಅಪಹರಿಸಿ, ಎರಡು ದಿನಗಳ ಕಾಲ ಫಾರ್ಮ್ಹೌಸ್ನಲ್ಲಿ ಬಂಧನದಲ್ಲಿ ಇರಿಸಿ ನಾಲ್ಕು ಮಂದಿ ನಿರಂತರ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಪೈಕಿ ಒಬ್ಬ ಆರೋಪಿ ಆಡಳಿತಾರೂಢ ಬಿಜೆಪಿಯ ಸ್ಥಳೀಯ ಮುಖಂಡ ಎಂದು ಪೊಲೀಸರು ಹೇಳಿದ್ದಾರೆ.
ಯುವತಿ ಫೆ. 18ರಂದು ಕಿರಾಣಿ ಖರೀದಿಸಲು ಹೋಗಿದ್ದಾಗ ಅಪಹರಿಸಲಾಗಿತ್ತು. ಆಕೆ ಸಂಬಂಧಿಕರ ಮನೆಗೆ ಹೋಗಿರಬಹುದು ಎಂಬ ಕಾರಣಕ್ಕಾಗಿ ಮೊದಲು ನಾಪತ್ತೆ ಪ್ರಕರಣ ದಾಖಲಿಸಿರಲಿಲ್ಲ. ಬಳಿಕ ಫೆ. 20ರಂದು ಆಕೆ ಮನೆ ಪಕ್ಕದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದಳು. ಆ ಬಳಿಕ ದೂರು ದಾಖಲಿಸಲಾಗಿತ್ತು ಎಂದು ಸಂತ್ರಸ್ತೆಯ ಕುಟುಂಬದವರು ವಿವರಿಸಿದ್ದಾರೆ.
ಜೈತಪುರ ಬಿಜೆಪಿ ಮುಖಂಡ ವಿಜಯ್ ತ್ರಿಪಾಠಿ ಮತ್ತು ಆತನ ಮೂವರು ಸಹಚರರಾದ ರಾಜೇಶ್ ಶುಕ್ಲಾ, ಮುನ್ನಾ ಸಿಂಗ್ ಮತ್ತು ಮೋನು ಮಹಾರಾಜ್ ಆಕೆಯನ್ನು ಅಪಹರಿಸಿ, ಫಾರ್ಮ್ಹೌಸ್ ಒಂದರಲ್ಲಿ ಕೂಡಿಹಾಕಿ ಅತ್ಯಾಚಾರ ಎಸಗಿದ್ದಾರೆ ಎಂದು ಕುಟುಂಬದವರು ದೂರು ನೀಡಿದ್ದಾರೆ.
"ಆಕೆಯನ್ನು ಹಿಂಬಾಲಿಸಿ ಕಾರಿನಲ್ಲಿ ಅಪಹರಿಸಲಾಗಿತ್ತು. ನಾವು ದೂರು ನೀಡಿದಾಗ ನಮ್ಮ ಮನೆ ಪಕ್ಕದಲ್ಲಿ ಬಿಸಾಕಿ ಹೋಗಿದ್ದಾರೆ. ಏನು ನಡೆಯಿತು ಎನ್ನುವುದನ್ನು ಯುವತಿ ಆಸ್ಪತ್ರೆಯಲ್ಲಿ ವಿವರಿಸಿದ ಬಳಿಕ ಅತ್ಯಾಚಾರ ನಡೆದಿರುವುದು ತಿಳಿಯಿತು" ಎಂದು ಹೇಳಿದ್ದಾರೆ. ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದು, ಶೋಧ ಕಾರ್ಯ ಮುಂದುವರಿದಿದೆ ಎಂದು ಶಾದೋಲ್ ಹೆಚ್ಚುವರಿ ಎಸ್ಪಿ ಮುಕೇಶ್ ವೈಶ್ಯ ಹೇಳಿದ್ದಾರೆ.