ಕೋವಿಡ್ ಲಸಿಕೆಯ ಡಿಜಿಟಲ್ ಸರ್ಟಿಫಿಕೇಟ್ ನಲ್ಲಿ ಮೋದಿ ಭಾವಚಿತ್ರ ಅಳವಡಿಸದಂತೆ ಚುನಾವಣಾ ಆಯೋಗಕ್ಕೆ ಟಿಎಂಸಿ ಪತ್ರ
ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ಡಿಜಿಟಲ್ ಕೋವಿಡ್ -19 ವ್ಯಾಕ್ಸಿನೇಷನ್ ಪ್ರಮಾಣಪತ್ರಗಳಲ್ಲಿ ಅಳವಡಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.
ಮಾರ್ಚ್ 27 ರಿಂದ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಎಂಟು ಹಂತದ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಪಕ್ಷವು ಮೋದಿ ನೇತೃತ್ವದ ಬಿಜೆಪಿಯೊಂದಿಗೆ ತೀವ್ರ ಪೈಪೋಟಿ ನಡೆಸುತ್ತಿದೆ. ಕಳೆದ ವಾರ ರಾಜ್ಯದಲ್ಲಿ ಚುನಾವಣಾ ದಿನಾಂಕಗಳನ್ನು ಘೋಷಿಸಲಾಗಿದ್ದು, ಸದ್ಯ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ.
ರಾಜ್ಯಸಭೆಯ ಟಿಎಂಸಿ ಸಂಸದೀಯ ಪಕ್ಷದ ಮುಖಂಡ ಡೆರೆಕ್ ಒ'ಬ್ರಿಯೆನ್ ಮಂಗಳವಾರ ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ, "ಚುನಾವಣೆ ನಡೆಸುವಾಗ ತೆರಿಗೆದಾರರ ವೆಚ್ಚದಲ್ಲಿ ಅನವಶ್ಯ ಅನುಕೂಲಗಳನ್ನು ಮತ್ತು ಅನಗತ್ಯ ಪ್ರಚಾರವನ್ನು ಪಡೆದುಕೊಳ್ಳದಂತೆ ನೀವು ಪ್ರಧಾನಿಯನ್ನು ತಡೆಯಬೇಕೆಂದು ನಾವು ಒತ್ತಾಯಿಸುತ್ತೇವೆ" ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
"ಅವರ (ಪ್ರಧಾನಮಂತ್ರಿ) ಕ್ರಮವು ಚುನಾವಣಾ ಮಾದರಿ ನೀತಿ ಸಂಹಿತೆಯ ಭಾಗ VII (ಅಧಿಕಾರದಲ್ಲಿರುವ ಪಕ್ಷ) ದ ನಿಬಂಧನೆಗಳನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ." ಕೇಂದ್ರದಲ್ಲಿ ಅಥವಾ ಸಂಬಂಧಪಟ್ಟ ರಾಜ್ಯ ಅಥವಾ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಪಕ್ಷವು ತನ್ನ ಚುನಾವಣಾ ಪ್ರಚಾರದ ಉದ್ದೇಶಗಳಿಗಾಗಿ ತನ್ನ ಅಧಿಕೃತ ಸ್ಥಾನವನ್ನು ಬಳಸಿಲ್ಲ ಎಂದು ಖಚಿತಪಡಿಸಬೇಕು. ಪತ್ರಿಕೆಗಳು ಮತ್ತು ಇತರ ಮಾಧ್ಯಮಗಳಲ್ಲಿ ಸಾರ್ವಜನಿಕ ಹಣದ ವೆಚ್ಚದಲ್ಲಿ ಜಾಹೀರಾತಿನ ವಿತರಣೆ ಮಾಡುವ ನಿಯಮದ ಕುರಿತಾದಂತೆಯೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.