ಬಕ್ಕತಲೆ ಕಾರಣಕ್ಕೆ ಪತಿಗೆ ವಿಚ್ಛೇದನ ನೀಡಲು ಮುಂದಾದ ಮಹಿಳೆ
ಲಕ್ನೋ : ಬಕ್ಕತಲೆಯ ಕಾರಣ ನೀಡಿ ಮಹಿಳೆಯೊಬ್ಬರು ತಮ್ಮ ಪತಿಯಿಂದ ವಿಚ್ಛೇದನ ಕೋರಿ ಕುಟುಂಬ ನ್ಯಾಯಾಲಯದ ಮೆಟ್ಟಲೇರಿರುವ ವಿಚಿತ್ರ ಪ್ರಕರಣ ಮೀರತ್ ನಿಂದ ವರದಿಯಾಗಿದೆ.
ದೆಹಲಿಗೆ ಹೊಂದಿಕೊಂಡಿರುವ ಪಶ್ಚಿಮ ಉತ್ತರ ಪ್ರದೇಶದ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಬಕ್ಕತಲೆಯ ಪತಿಯಿಂದ ವಿಚ್ಛೇದನ ನೀಡುವಂತೆ ಕೋರಿದ್ದಾರೆ.
ವಿವಾಹಕ್ಕೆ ಮುನ್ನ ವಿಗ್ ಧರಿಸಿ ಬಕ್ಕತಲೆ ಸಮಸ್ಯೆಯನ್ನು ಮುಚ್ಚಿಟ್ಟಿದ್ದಾಗಿ ಮಹಿಳೆ ದೂರಿದ್ದಾರೆ. 2020ರ ಜನವರಿಯಲ್ಲಿ ಈ ಜೋಡಿ ಗಾಝಿಯಾಬಾದ್ನಲ್ಲಿ ವಿವಾಹ ಬಂಧನಕ್ಕೊಳಪಟ್ಟಿದ್ದರು. ಆದರೆ ವರ್ಷದ ಬಳಿಕ ಪತಿಯ ಬಕ್ಕತಲೆ ಸಮಸ್ಯೆ ಗಮನಕ್ಕೆ ಬಂದಿದೆ. ಮೀರತ್ ಪೊಲೀಸ್ ಲೇನ್ ವೈವಾಹಿಕ ಕೌನ್ಸಿಲಿಂಗ್ ಕೇಂದ್ರಕ್ಕೆ ದಂಪತಿ ಆಗಮಿಸಿದ್ದ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ವಿಚ್ಛೇದನಕ್ಕೆ ಮುನ್ನ ರಾಜಿ ಪ್ರಯತ್ನಗಳು ಕಡ್ಡಾಯ.
ವಿವಾಹಕ್ಕೆ ಮುನ್ನ ಪತಿಗೆ ದಪ್ಪ ಕೂದಲು ಇತ್ತು. ಆದರೆ ವಿವಾಹದ ಬಳಿಕ ಆತ ವಾಸ್ತವವಾಗಿ ಬೋಳುತಲೆಯವ. ವಿಗ್ ಧರಿಸಿದ್ದು ಕಂಡುಬಂತು ಎಂದು ಸಲಹಾ ತಜ್ಞರಿಗೆ ಮಹಿಳೆ ಹೇಳಿದ್ದಾರೆ. ಈ ಸಮಸ್ಯೆಯನ್ನು ಮುಚ್ಚಿಟ್ಟು ವಿಶ್ವಾಸದ್ರೋಹ ಎಸಗಿದ ಕಾರಣಕ್ಕೆ ವಿಚ್ಛೇದನ ಬಯಸಿರುವುದಾಗಿ ಮಹಿಳೆ ಸ್ಪಷ್ಟಪಡಿಸಿದ್ದಾರೆ.
ವಿವಾಹವಾಗಿ ಒಂದು ವರ್ಷ ಕಾಲ ಪತಿ ಈ ರಹಸ್ಯವನ್ನು ಕಾಪಾಡಿಕೊಂಡು ಬಂದಿದ್ದ. ಆದರೆ ಇತ್ತೀಚೆಗೆ ಒಂದು ದಿನ ವಿಗ್ ಧರಿಸದ ಸ್ಥಿತಿಯಲ್ಲಿ ಅವರನ್ನು ಕಂಡಾಗ ತಲೆ ಸಂಪೂರ್ಣ ಬೋಳು ಇರುವುದು ಕಂಡುಬಂತು. ನನ್ನ ಸ್ನೇಹಿತರು ಹಾಗೂ ಸಂಬಂಧಿಕರ ಎದುರು ನಗಗೆ ಮುಜುಗರವಾಗುತ್ತಿದ್ದು, ಆತನ ಜತೆಗೆ ಬಾಳ್ವೆ ಮಾಡುವುದು ಕಷ್ಟ ಎಂದು ಮಹಿಳೆ ವಾದಿಸಿದ್ದಾರೆ.