ಆಗ್ರಾ: ವಿವಾಹವಾಗಲು ಬಯಸಿದ್ದ ಯುವತಿ, ಆಕೆಯ ತಾಯಿಯ ಹತ್ಯೆಗೈದ ಯುವಕ
ಆಗ್ರಾ, ಮಾ. 8: ಹತ್ತೊಂಬತ್ತು ವರ್ಷದ ಯುವತಿಯನ್ನು ವಿವಾಹವಾಗಲು ಬಯಸಿದ್ದ ವ್ಯಕ್ತಿಯೋರ್ವ ಆಕೆ ಹಾಗೂ ಆಕೆಯ 50 ವರ್ಷದ ತಾಯಿಯನ್ನು ಇರಿದು ಹತ್ಯೆಗೈದ ಘಟನೆ ಉತ್ತರಪ್ರದೇಶದ ಆಗ್ರದಲ್ಲಿ ರವಿವಾರ ರಾತ್ರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವ್ಯಕ್ತಿಯ ದಾಳಿ ಸಂದರ್ಭ ಗಂಭೀರ ಗಾಯಗೊಂಡಿರುವ ಇನ್ನೋರ್ವ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆರೋಪಿ ಯುವತಿಯ ಮನೆಯ ಸಮೀಪವೇ ವಾಸಿಸುತ್ತಿದ್ದ. ಆತ ಯುವತಿಯ ಗೆಳೆಯನಾಗಿದ್ದ ಹಾಗೂ ಆಕೆಯನ್ನು ವಿವಾಹವಾಗಲು ಬಯಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಅವರ ಗೆಳೆತನದ ಬಗ್ಗೆ ಉಭಯ ಕುಟುಂಬಗಳಿಗೆ ಅಸಮಾಧಾನ ಇತ್ತು. ಕೆಲವು ದಿನಗಳ ಹಿಂದೆ ಈ ವಿಷಯದ ಕುರಿತಂತೆ ಎರಡೂ ಕುಟುಂಬಗಳ ನಡುವೆ ವಾಗ್ವಾದ ನಡೆದಿತ್ತು. ಯುವತಿಯ ಕುಟುಂಬ ಎರಡು ವಾರಗಳ ಹಿಂದೆ ಆಕೆಗೆ ಬೇರೆಡೆಯ ವಿವಾಹ ನಿಶ್ಚಿತಾರ್ಥ ಮಾಡಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.
Next Story