ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್: ಸೆಮಿ ಫೈನಲ್ ನಲ್ಲಿ ಸೋತ ಸಿಂಧು
ಲಂಡನ್: ಥಾಯ್ಲೆಂಡ್ ನ ಪೋರ್ನ್ ಪಾವಿ ಚೋಚುವಾಂಗ್ ವಿರುದ್ಧ ನೇರ ಗೇಮ್ ಗಳ ಅಂತರದಿಂದ ಸೋತಿರುವ ಹಾಲಿ ವಿಶ್ವ ಚಾಂಪಿಯನ್ ಪಿ.ವಿ. ಸಿಂಧು ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ನಲ್ಲಿ ಮೊದಲ ಬಾರಿ ಫೈನಲ್ ತಲುಪುವ ಅಪೂರ್ವ ಅವಕಾಶವನ್ನು ಕಳೆದುಕೊಂಡರು.
ಶನಿವಾರ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಸೆಮಿ ಫೈನಲ್ ಪಂದ್ಯದಲ್ಲಿ ಸಿಂಧು ಆರನೇ ಶ್ರೇಯಾಂಕದ ಚೋಚುವಾಂಗ್ ವಿರುದ್ಧ 17-21, 9-21 ಗೇಮ್ ಗಳ ಅಂತರದಿಂದ ಸೋತಿದ್ದಾರೆ. ಕೇವಲ 45 ನಿಮಿಷಗಳಲ್ಲಿ ಕೊನೆಗೊಂಡ ಪ್ರತಿಷ್ಠಿತ 1000 ಟೂರ್ನಮೆಂಟ್ ನಲ್ಲಿ ಸಿಂಧು ಹೆಚ್ಚು ಹೋರಾಟವನ್ನೇ ನೀಡಲಿಲ್ಲ. ಸಿಂಧು ಅವರು ಚೋಚುವಾಂಗ್ ವಿರುದ್ದ ಆಡಿರುವ 6 ಪಂದ್ಯಗಳಲ್ಲಿ ಎರಡನೇ ಬಾರಿ ಸೋಲನುಭವಿಸಿದರು.
ವಲ್ಡ್ ಟೂರ್ ಫೈನಲ್ಸ್ ನಲ್ಲಿ ಸೆಮಿ ಫೈನಲ್ ತಲುಪಿದ್ದ ಚೋಚುವಾಂಗ್ ಮುಂದಿನ ಸುತ್ತಿನಲ್ಲಿ ಮತ್ತೊಂದು ಸೆಮಿ ಫೈನಲ್ ನಲ್ಲಿ ಜಯ ಸಾಧಿಸುವ ಥಾಯ್ಲೆಂಡ್ ನ ಇಂತನಾನ್ ಅಥವಾ ಜಪಾನಿನ ನೊಝೊಮಿ ಒಕುಹರಾ ಅವರನ್ನು ಎದುರಿಸಲಿದ್ದಾರೆ.
Next Story