ವಿವಿಧ ಪತ್ರಿಕೆ ಮತ್ತು ಟಿ.ವಿ ಚಾನೆಲ್ ಗಳ ಸಂಪಾದಕರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ ಆರೆಸ್ಸೆಸ್ ಮುಖಂಡ ಭಾಗ್ವತ್
ʼNewslaundy.com' ವರದಿ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗ್ವತ್, ಪತ್ರಿಕೆ ಹಾಗೂ ಟಿವಿ ಚಾನೆಲ್ ಗಳ 52 ಸಂಪಾದಕರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ವಿಚಾರವನ್ನು ಸ್ವತಃ ಆರೆಸ್ಸೆಸ್ ನ ಅಧಿಕೃತರು ತಿಳಿಸಿದ್ದಾರೆಂದು newslaundry.com ವರದಿ ಮಾಡಿದೆ.
ಇತ್ತೀಚಿಗಿನ ಮಾಹಿತಿಯ ಪ್ರಕಾರ, 2020 ರ ಡಿಸೆಂಬರ್ 8 ರಂದು ದೆಹಲಿಯಲ್ಲಿ ವಿವಿಧ ಪತ್ರಿಕೆಗಳು ಮತ್ತು ಸುದ್ದಿ ವಾಹಿನಿಗಳ ಸಂಪಾದಕರೊಂದಿಗೆ ಎರಡು ಅಧಿವೇಶನಗಳ ಸಭೆ ನಡೆಸಲಾಯಿತು. ಈ ಸಭೆಯಲ್ಲಿ 52 ಸಂಪಾದಕರು ಭಾಗವಹಿಸಿದ್ದರು. ಆದರೆ, ಈ ಸಭೆಯಲ್ಲಿ ಭಾಗಿಯಾಗಿದ್ದವರ ಹೆಸರು ಇನ್ನೂ ಬಹಿರಂಗಗೊಂಡಿಲ್ಲ ಎಂದು ವರದಿ ತಿಳಿಸಿದೆ. 2020 ಡಿಸೆಂಬರ್ 25ರಂದು ನಡೆದ ಸಭೆಯಲ್ಲಿ 18 ಮಂದಿ ಸಂಪಾದಕರು ಮತ್ತು 13 ಮಂದಿ ಟಿವಿ ಸೀರಿಯಲ್ ನಿರ್ಮಾಪಕರು ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.
ಇದಲ್ಲದೇ, ಫೆಬ್ರವರಿ 22-23ರಂದು ದಿಲ್ಲಿಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪರಿಣಾಮಕಾರಿಯಾಗಿರುವ ವ್ಯಕ್ತಿಗಳನ್ನು ಕರೆಸಿ ಸಮಾವೇಶ ನಡೆಸಲಾಗಿದ್ದು, ಅದರಲ್ಲಿ 18 ಪ್ರಾಂತ್ಯಗಳ 14 ಮಹಿಳೆಯರು ಸೇರಿದಂತೆ ಒಟ್ಟು 85 ಮಂದಿ ಉಪಸ್ಥಿತರಿದ್ದರು ಎಂದು ತಿಳಿದು ಬಂದಿದೆ.
ಈ ಹಿಂದೆ ಕೇಂದ್ರ ಸಚಿವರ ನಿಯೋಗವೊಂದು ಹಲವು ಪತ್ರಕರ್ತರನ್ನು ಭೇಟಿಯಾಗಿದ್ದ ವಿಷಯ ಇತ್ತೀಚೆಗಷ್ಟೇ ಬಹಿರಂಗಗೊಂಡಿದ್ದು, ಸರಕಾರದ ಪರವಾಗಿಲ್ಲದ ಅಥವಾ ಸರಕಾರದ ನಿರ್ಧಾರಗಳ ಕುರಿತು ಭಿನ್ನಾಭಿಪ್ರಾಯ ತಾಳಿರುವ ಮಾಧ್ಯಮಗಳನ್ನು ಹೇಗೆ ನಿಯಂತ್ರಿಸುವುದು ಎನ್ನುವುದರ ಕುರಿತು ಚರ್ಚೆ ನಡೆಸಲಾಗಿತ್ತು ಎಂದು ವರದಿಯು ಉಲ್ಲೇಖಿಸಿದೆ.