ಜಯಾ ಬಚ್ಚನ್ ಬಿಜೆಪಿ ವಿರುದ್ಧ ಮಾತನಾಡಬಹುದು, ನನ್ನ ಕುರಿತು ಏನೂ ಹೇಳಲಾರರು: ಬಾಬುಲ್ ಸುಪ್ರಿಯೋ
ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿರುವ ಸಮಾಜವಾದಿ ಪಕ್ಷದ (ಎಸ್ಪಿ) ಸಂಸದೆ ಜಯಾ ಬಚ್ಚನ್ ಅವರು ಬಿಜೆಪಿ ವಿರುದ್ಧ ಮಾತನಾಡಬಹುದು ಆದರೆ ನನ್ನ ವಿರುದ್ಧ ಎಂದಿಗೂ ಏನನ್ನೂ ಹೇಳುವುದಿಲ್ಲ ಎಂದು ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಸೋಮವಾರ ಹೇಳಿದ್ದಾರೆ.
"ನಾನು ಅವರನ್ನು (ಜಯಾ ಬಚ್ಚನ್) ಪಶ್ಚಿಮ ಬಂಗಾಳದಲ್ಲಿ ಸ್ವಾಗತಿಸುತ್ತೇನೆ. ನಾನು ಅವರೊಂದಿಗೆ ಕುಟುಂಬ ಸಂಬಂಧವನ್ನು ಹೊಂದಿಲ್ಲವಾದರೂ, ನನ್ನ ಕುರಿತು ಅವರು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಅವರು ಬಿಜೆಪಿ ವಿರುದ್ಧ ಮಾತನಾಡಬಹುದು. ಆದರೆ ಅವರು ಎಂದಿಗೂ ನನ್ನ ವಿರುದ್ಧ ಏನನ್ನೂ ಹೇಳುವುದಿಲ್ಲ" ಎಂದು ಸುಪ್ರಿಯೋ ಎಎನ್ಐಗೆ ತಿಳಿಸಿದರು.
ಟಿಎಂಸಿ ಬಲಾಢ್ಯ ನಾಯಕ ಅರೂಪ್ ಬಿಸ್ವಾಸ್ ವಿರುದ್ಧ ಬಿಜೆಪಿ ತನ್ನ ಪಕ್ಷದ ಸಂಸದ ಹಾಗೂ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಅವರನ್ನು ಟೋಲಿಗಂಜ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ.
ಟಿಎಂಸಿ ಮೂಲಗಳ ಪ್ರಕಾರ, ನಟಿ ಹಾಗೂ ರಾಜಕಾರಣಿ ಜಯಾ ಬಚ್ಚನ್ ಟಿಎಂಸಿ ಪಕ್ಷದ ಅಭ್ಯರ್ಥಿಗಳ ಪ್ರಚಾರಕ್ಕಾಗಿ ಎಪ್ರಿಲ್ 5 ರಿಂದ ಎಪ್ರಿಲ್ 8 ರವರೆಗೆ ಪಶ್ಚಿಮ ಬಂಗಾಳದಲ್ಲಿರುತ್ತಾರೆ.