ಭಾರತದಲ್ಲಿ 95 ದಿನಗಳಲ್ಲಿ 13 ಕೋಟಿ ಜನರಿಗೆ ಕೋವಿಡ್ ಲಸಿಕೆ
ಜಗತ್ತಿನಲ್ಲೇ ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಜನರಿಗೆ ಲಸಿಕೆ
ಹೊಸದಿಲ್ಲಿ, ಎ. 19: ದೇಶದಲ್ಲಿ ನೀಡಲಾದ ಕೋವಿಡ್-19 ಲಸಿಕೆ ಡೋಸ್ಗಳ ಸಂಖ್ಯೆ 13 ಕೋಟಿ ದಾಟುತ್ತಿರುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ, 95 ದಿನಗಳಲ್ಲಿ 13 ಕೋಟಿ ಲಸಿಕೆ ಡೋಸ್ಗಳನ್ನು ವೇಗವಾಗಿ ನೀಡಿದ ದೇಶ ಭಾರತ ಎಂದಿದೆ. ಇಷ್ಟು ಡೋಸ್ಗಳನ್ನು ನೀಡಲು ಅಮೆರಿಕ 101 ದಿನ, ಚೀನಾ 109 ದಿನಗಳನ್ನು ತೆಗೆದುಕೊಂಡಿದೆ ಎಂದು ಸಚಿವಾಲಯ ತಿಳಿಸಿದೆ.
19,01,413 ಬೈಠಕ್ಗಳ ಮೂಲಕ 13,01,19,310 ಡೋಸ್ ಲಸಿಕೆ ನೀಡಲಾಗಿದೆ ಎಂದು ಇಂದು ಬೆಳಗ್ಗೆ 7 ಗಂಟೆ ವರೆಗಿನ ತಾತ್ಕಾಲಿಕ ವರದಿ ಹೇಳಿದೆ. ಇದರಲ್ಲಿ ಮೊದಲ ಡೋಸ್ ಪಡೆದುಕೊಂಡ 92,01,728 ಆರೋಗ್ಯ ಕಾರ್ಯಕರ್ತರು, ಎರಡನೇ ಡೋಸ್ ಪಡೆದುಕೊಂಡ 58,17,262 ಆರೋಗ್ಯ ಕಾರ್ಯಕರ್ತರು ಸೇರಿದ್ದಾರೆ. ಅಲ್ಲದೆ, ಮೊದಲ ಡೋಸ್ ಪಡೆದುಕೊಂಡ 1,15,62,535 ಮುಂಚೂಣಿ ಕಾರ್ಯಕರ್ತರು ಹಾಗೂ ಎರಡನೇ ಡೋಸ್ ಪಡೆದುಕೊಂಡ 58,55,821 ಮುಂಚೂಣಿ ಕಾರ್ಯಕರ್ತರು ಸೇರಿದ್ದಾರೆ.
60 ವರ್ಷಕ್ಕಿಂತ ಮೇಲ್ಪಟ್ಟ 4,73,55,942 ಮಂದಿ ಮೊದಲ ಡೋಸ್ ಹಾಗೂ 53,04,679 ಮಂದಿ ಎರಡನೇ ಡೋಸ್ ಪಡೆದುಕೊಂಡಿದ್ದಾರೆ. 45-60ರ ವರೆಗಿನ ಪ್ರಾಯದ ವರ್ಗದಲ್ಲಿ 4,35,25,687 ಮಂದಿ ಮೊದಲ ಡೋಸ್ ಹಾಗೂ 14,95,656 ಮಂದಿ ಎರಡನೇ ಡೋಸ್ ಪಡೆದುಕೊಂಡಿದ್ದಾರೆ. ದೇಶದಲ್ಲಿ ಇದುವರೆಗೆ ನೀಡಲಾದ ಒಟ್ಟು ಡೋಸ್ನಲ್ಲಿ ಮಹಾರಾಷ್ಟ್ರ, ರಾಜಸ್ಥಾನ, ಉತ್ತರಪ್ರದೇಶ, ಗುಜರಾತ್, ಪಶ್ಚಿಮಬಂಗಾಳ, ಕರ್ನಾಟಕ, ಮಧ್ಯಪ್ರದೇಶ ಹಾಗೂ ಕೇರಳ-ಈ 8 ರಾಜ್ಯಗಳಲ್ಲಿ ಶೇ. 59.25 ಡೋಸ್ಗಳನ್ನು ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.