ಉತ್ತರಪ್ರದೇಶ: ಆ್ಯಂಬುಲೆನ್ಸ್ ನಿಂದ ಮೃತದೇಹಗಳನ್ನು ನದಿಗೆ ಎಸೆಯುತ್ತಿರುವ ವೀಡಿಯೊ ವೈರಲ್
ಸಾಂದರ್ಭಿಕ ಚಿತ್ರ
ಪಾಟ್ನಾ: ಉತ್ತರಪ್ರದೇಶ ಹಾಗೂ ಬಿಹಾರ ನಡುವಿನ ಗಡಿಯ ಸಮೀಪದ ನದಿಯ ಸೇತುವೆ ಅಡಿಯಲ್ಲಿ ಮತ್ತಷ್ಟು ಮೃತದೇಹಗಳು ತೇಲುತ್ತಿರುವುದು ಮಂಗಳವಾರ ಕಂಡು ಬಂದಿದ್ದು, ಈ ಮೃತದೇಹಗಳನ್ನು ಆ್ಯಂಬುಲೆನ್ಸ್ಗಳು ನದಿಗೆ ಎಸೆಯುತ್ತಿರುವ ವೀಡಿಯೊ ಕೂಡ ಈಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಸೇತುವೆಯ ಮೇಲಿನಿಂದ ಆ್ಯಂಬುಲೆನ್ಸ್ ಚಾಲಕರು ಮೃತದೇಹಗಳನ್ನು ಕೊರೋನ ಸೋಂಕಿನಿಂದ ಮೃತಪಟ್ಟವರ ಮೃತದೇಹಗಳನ್ನು ನದಿಗೆ ಎಸೆಯುತ್ತಿರುವ ದೃಶ್ಯ ಸಾಮಾಜಿಕ ಜಾಲ ತಾಣದಲ್ಲಿ ವ್ಯಾಪಕ ಶೇರ್ ಆಗಿದ್ದು, ಕೊರೋನದಿಂದ ಮೃತಪಟ್ಟವರು ಹಾಗೂ ಅವರ ಕುಟುಂಬದವರ ಬಗ್ಗೆ ಕಾಳಜಿ ಇಲ್ಲದಿರುವ ಬಗ್ಗೆ ಪೋಸ್ಟ್ ಗಳು ಕಳವಳ ವ್ಯಕ್ತಪಡಿಸಿವೆ.
ಉತ್ತರಪ್ರದೇಶ ಬಲ್ಲಿಯಾದ ಗಡಿಯ ಬಿಹಾರ್ನ ಸರನ್ ಸಮೀಪ ಇರುವ ಜೈಪ್ರಭಾ ಸೇತು ಎಂದು ಕರೆಯಲಾಗುವ ಸೇತುವೆಯಿಂದ ಆ್ಯಂಬುಲೆನ್ಸ್ ಚಾಲಕರು ಕೊರೋನ ಸೋಂಕಿನಿಂದ ಮೃತಪಟ್ಟವರ ಮೃತದೇಹಗಳನ್ನು ಎಸೆದಿದ್ದಾರೆ ಎಂದು ಬಿಹಾರ ಬಿಜೆಪಿಯ ಸಂಸದ ಜನಾರ್ದನ ಸಿಂಗ್ ಸಿಗ್ರಿವಾಲ್ ಅವರು ಆರೋಪಿಸಿದ್ದಾರೆ.
ಅಲ್ಲಿ ಮೃತದೇಹಗಳನ್ನು ಎಸೆಯದಂತೆ ಆ್ಯಂಬುಲೆನ್ಸ್ ಚಾಲಕರಿಗೆ ಸೂಚನೆ ನೀಡುವಂತೆ ಬಿಹಾರದ ಸರಣ್ ಜಿಲ್ಲಾಡಳಿತವನ್ನು ಸಿಗ್ರಿವಾಲ್ ಆಗ್ರಹಿಸಿದ್ದಾರೆ.
ಕೊರೋನ ಸೋಂಕಿತರ ಮೃತದೇಹಗಳನ್ನು ನದಿಗೆ ಎಸೆಯುತ್ತಿರುವ ಬಗ್ಗೆ ಎರಡೂ ರಾಜ್ಯಗಳು ಆರೋಪ-ಪ್ರತ್ಯಾರೋಪದಲ್ಲಿ ತೊಡಗಿವೆ.
ಈ ನಡುವೆ ಉತ್ತರಪ್ರದೇಶ ಹಾಗೂ ಬಿಹಾರ್ ಎರಡೂ ರಾಜ್ಯಗಳು ತಪ್ಪೆಸಗುತ್ತಿವೆ ಎಂದು ಸ್ಥಳೀಯರು ಹೇಳಿದ್ದಾರೆ. ‘‘ಉತ್ತರಪ್ರದೇಶ ಹಾಗೂ ಬಿಹಾರದ ಆ್ಯಂಬುಲೆನ್ಸ್ ಚಾಲಕರು ಮೃತದೇಹಗಳನ್ನು ನದಿಗೆ ಎಸೆಯುತ್ತಿದ್ದಾರೆ’’ ಎಂದು ಇಲ್ಲಿನ ನಿವಾಸಿ ಅರವಿಂದ ಸಿಂಗ್ ಹೇಳಿದ್ದಾರೆ.