ವಿವಾಹೇತರ ಸಂಬಂಧ ಆರೋಪ: ಮಹಿಳೆಯ ನಗ್ನ ಮೆರವಣಿಗೆ
ಕೊಲ್ಕತ್ತಾ, ಜೂ.15: ಅಕ್ರಮ ಸಂಬಂಧ ಹೊಂದಿದ್ದ ಆರೋಪದಲ್ಲಿ ಬುಡಕಟ್ಟು ಜನಾಂಗದ ಮಹಿಳೆಯೊಬ್ಬರನ್ನು ಮನೆಯಿಂದ ಹೊರಕ್ಕೆಳೆದು ಬಟ್ಟೆ ಬಿಚ್ಚಿಸಿ ಬೆತ್ತಲು ಮೆರವಣಿಗೆ ನಡೆಸಿದ ಅಮಾನವೀಯ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಇಡೀ ಘಟನೆಯನ್ನು ಚಿತ್ರೀಕರಿಸಲಾಗಿದ್ದು, ಈ ಸಂಬಂಧ 11 ಮಂದಿ ಆರೋಪಿಗಳ ಪೈಕಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಜೂನ್ 9ರಂದೇ ನಡೆದಿದ್ದರೂ, ಘಟನೆ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.
ಆರು ತಿಂಗಳ ಹಿಂದೆ ಗಂಡನಿಂದ ಬೇರ್ಪಟ್ಟಿದ್ದ ಈ ಮಹಿಳೆಗೆ ಅಕ್ರಮ ಸಂಬಂಧ ಇತ್ತು ಎಂದು ಆರೋಪಿಸಲಾಗಿದೆ. ಕಳೆದ ವಾರ ಆಕೆ ಮನೆಗೆ ಮರಳಿದಾಗ ಬುಧವಾರ ರಾತ್ರಿ ಆಕೆಯ ಮನೆಗೆ ಧಾವಿಸಿದ ಗ್ರಾಮಸ್ಥರ ಗುಂಪು ಆಕೆಯನ್ನು ಮನೆಯಿಂದ ಹೊರಕ್ಕೆಳೆದು ಬಟ್ಟೆ ಬಿಚ್ಚಿಸಿತು. ಬಳಿಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಆಕೆಯನ್ನು ನಗ್ನವಾಗಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.
ಈ ಘಟನೆ ಬಳಿಕ ಮಹಿಳೆ ನಾಪತ್ತೆಯಾಗಿದ್ದು, ಯಾರೂ ಈ ಬಗ್ಗೆ ಪೊಲೀಸರಿಗೆ ದೂರು ನೀಡಿರಲಿಲ್ಲ. ಮಹಿಳೆಯನ್ನು ಬಳಿಕ ಅಸ್ಸಾಂನಲ್ಲಿರುವ ತವರು ಮನೆಯಲ್ಲಿ ಪತ್ತೆ ಮಾಡಿ ವಾಪಸ್ ಕರೆಸಲಾಗಿದೆ. ಆಕೆಗೆ ಕೌನ್ಸಿಲಿಂಗ್ ನಡೆಸಿ ಪತಿಯ ಸಮ್ಮುಖದಲ್ಲೇ ಎಫ್ಐಆರ್ ದಾಖಲಿಸಲಾಗಿದೆ. ಹಲ್ಲೆ ನಡೆಸಿದ್ದಾರೆ ಎಂದು ಎಫ್ಐಆರ್ನಲ್ಲಿ ಹೆಸರಿಸಿರುವವರ ಪೈಕಿ ಐವರು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.