ಕೇರಳದ ಕೊಚ್ಚಿಯ ಸಮೀಪ ʼದ್ವೀಪದಂತಹʼ ರಚನೆ: ಗೂಗಲ್ ಮ್ಯಾಪ್ ನಲ್ಲಿ ಪತ್ತೆ
ಹೊಸದಿಲ್ಲಿ: ಗೂಗಲ್ ಮ್ಯಾಪ್ ಗಳ ಉಪಗ್ರಹ ಚಿತ್ರದಲ್ಲಿ ಅರೇಬಿಯನ್ ಸಮುದ್ರದಲ್ಲಿರುವ ಕೇರಳದ ಕೊಚ್ಚಿಯ ಕರಾವಳಿಯಲ್ಲಿ ಹೊಸ ಹುರುಳಿ ಆಕಾರದ ‘ದ್ವೀಪ’ದಂತಹ ರಚನೆಯನ್ನು ಕಾಣಬಹುದು. ಇದು ತಜ್ಞರು ಸೇರಿದಂತೆ ಅನೇಕರ ಆಸಕ್ತಿಯನ್ನು ಹುಟ್ಟುಹಾಕಿದೆ.
ಇದು ನೀರೊಳಗಿನ ರಚನೆ ಎಂದು ಪರಿಗಣಿಸಲಾಗುತ್ತಿದ್ದು, ಸಮುದ್ರದಲ್ಲಿ ಇಂತಹದು ಕಾಣ ಸಿಗುವುದಿಲ್ಲ ಎಂದು TheNewsMinute.com ವರದಿ ಮಾಡಿದೆ. ಚೆಲ್ಲನಂ ಕಾರ್ಶಿಕಾ ಪ್ರವಾಸೋದ್ಯಮ ಅಭಿವೃದ್ಧಿ ಸೊಸೈಟಿ ಎಂಬ ಸಂಸ್ಥೆ ಅಧಿಕಾರಿಗಳಿಗೆ ಪತ್ರ ಬರೆದ ನಂತರ ಕೇರಳ ಮೀನುಗಾರಿಕೆ ಹಾಗೂ ಸಾಗರ ಅಧ್ಯಯನ ವಿಶ್ವವಿದ್ಯಾಲಯದ (ಕುಫೋಸ್) ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಲು ಯೋಜಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಕಳೆದ ನಾಲ್ಕು ವರ್ಷಗಳಿಂದ ನಾವು ರಚನೆಯನ್ನು ಗಮನಿಸುತ್ತಿದ್ದೇವೆ ಹಾಗೂ ಅದು ಗಾತ್ರದಲ್ಲಿ ವಿಸ್ತರಿಸುತ್ತಿರುವುದನ್ನು ನೋಡಿಲ್ಲ ಎಂದು ಸಂಘಟನೆಯ ಪ್ರತಿನಿಧಿ ಹೇಳಿದ್ದಾರೆ.
ಸಂಘಟನೆಯ ಅಧ್ಯಕ್ಷ ಕೆಎಕ್ಸ್ ಜುಲಪ್ಪನ್ ಅವರು 2021 ರ ಜೂನ್ 5 ರಂದು ಫೇಸ್ಬುಕ್ ಪೋಸ್ಟ್ ನಲ್ಲಿ ಗೂಗಲ್ ನಕ್ಷೆಯ ಚಿತ್ರಣದ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿದ್ದಾರೆ ಹಾಗೂ ಈ ರಚನೆಯು ಪೋರ್ಟ್ ಗೇಟ್ ನ ಪಶ್ಚಿಮಕ್ಕೆ 7 ಕಿ.ಮೀ ದೂರದಲ್ಲಿದೆ ಎಂದು ನಮೂದಿಸಿದ್ದರು ಮತ್ತು ಇದು ಗೂಗಲ್ ನಕ್ಷೆಗಳ ಚಿತ್ರದ ಆಧಾರದ ಮೇಲೆ ಸುಮಾರು 8 ಕಿ.ಮೀ ಉದ್ದ ಮತ್ತು 3.5 ಕಿ.ಮೀ ಅಗಲವಿದೆ ಎಂದು ಹೇಳಿದ್ದರು.