ಉತ್ತರಪ್ರದೇಶ: ಸೇತುವೆಗೆ ನೇತುಹಾಕಿದ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆ
ಲಕ್ನೊ, ಜು.22: ಉತ್ತರಪ್ರದೇಶದ ಡಿಯೋರಿಯಾ ಜಿಲ್ಲೆಯ ಸೇತುವೆಯೊಂದಕ್ಕೆ ನೇತುಹಾಕಿದ ಸ್ಥಿತಿಯಲ್ಲಿ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿದ್ದು ಆಕೆಯನ್ನು ಸೋಮವಾರ ಸಂಜೆಯಿಂದ ಮಂಗಳವಾರ ರಾತ್ರಿಯ ನಡುವಿನ ಅವಧಿಯಲ್ಲಿ ಕೊಲೆ ಮಾಡಲಾಗಿದೆ ಎಂದು ಯುವತಿಯ ಚಿಕ್ಕಮ್ಮ ಆರೋಪಿಸಿದ್ದಾರೆ.
ಯುವತಿಯ ವರ್ತನೆ, ಆಕೆಯ ಜೀವನಶೈಲಿಯ ಬಗ್ಗೆ ಆಕೆಯ ಅಜ್ಜ ಹಾಗೂ ಇಬ್ಬರು ಮಾವ ಹಲವು ಬಾರಿ ಆಕ್ಷೇಪಿಸಿದ್ದರು. ಈ ವಿಷಯದಲ್ಲಿ ಹಲವು ಬಾರಿ ಜಗಳವೂ ಆಗಿದೆ. ಎರಡು ದಿನದ ಹಿಂದೆ ಮತ್ತೆ ಜಗಳವಾದಾಗ ಅಜ್ಜ ಮತ್ತು ಮಾವಂದಿರು ಕಬ್ಬಿಣದ ರಾಡ್ನಿಂದ ಥಳಿಸಿದಾಗ ಆಕೆ ಪ್ರಜ್ಞೆ ತಪ್ಪಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸುವುದಾಗಿ ತಾಯಿಗೆ ಹೇಳಿ, ಅವಳನ್ನು ಸೇತುವೆಯಿಂದ ಕೆಳಕ್ಕೆ ಎಸೆದಿದ್ದಾರೆ. ಆದರೆ ಮೃತದೇಹ ಸೇತುವೆಯಲ್ಲಿ ಸಿಲುಕಿಕೊಂಡಿದೆ ಎಂದು ಯುವತಿಯ ಚಿಕ್ಕಮ್ಮ ನೀಡಿದ ದೂರಿನಂತೆ ತನಿಖೆ ನಡೆಸಲಾಗುತ್ತಿದೆ ಎಂದು ದಿಯೋರಿಯಾ ಠಾಣಾಧಿಕಾರಿ ಶ್ರೀಪತಿ ಮಿಶ್ರ ಹೇಳಿದ್ದಾರೆ. ಯುವತಿಯ ಅಜ್ಜನನ್ನು ಬಂಧಿಸಲಾಗಿದ್ದು ಇತರ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿರುವುದಾಗಿ ವರದಿಯಾಗಿದೆ.