ಕಸ್ಟಡಿ ಹಿಂಸೆ ಪ್ರಕರಣದ ವರದಿ ಮಾಡಿದ್ದ ಪತ್ರಕರ್ತನ ವಿರುದ್ಧದ ಎಫ್ಐಆರ್ ರದ್ದುಗೊಳಿಸಿದ ಜಮ್ಮು ಕಾಶ್ಮೀರ ಹೈಕೋರ್ಟ್
Twitter/Asif Iqbal Naik
ಜಮ್ಮು: ಕಸ್ಟಡಿ ಹಿಂಸೆ ಪ್ರಕರಣಕ್ಕೆ ಸಂಬಂಧಿಸಿದ್ದ ವರದಿ ಪ್ರಕಟಿಸಿದ್ದಕ್ಕಾಗಿ ಪತ್ರಕರ್ತ ಆಸಿಫ್ ಇಕ್ಬಾಲ್ ನಾಯ್ಕ್ ಅವರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಅನ್ನು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ರದ್ದುಗೊಳಿಸಿದೆಯಲ್ಲದೆ ಪತ್ರಕರ್ತನ ವಿರುದ್ಧ ದಾಖಲಾಗಿರುವ ಎಫ್ಐಆರ್ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಬಣ್ಣಿಸಿದೆ.
ಎಫ್ಐಆರ್ ದಾಖಲಿಸಿದ ರೀತಿಯನ್ನು ಗಮನಿಸಿದಾಗ ಪೊಲೀಸರ ದುರುದ್ದೇಶವನ್ನು ಅದು ಪ್ರತಿಫಲಿಸುತ್ತದೆ ಹಾಗೂ ಅವರು ಪತ್ರಕರ್ತನ ಸದ್ದಡಗಿಸಲು ವಿಶಿಷ್ಟ ವಿಧಾನವನ್ನು ಅನುಸರಿಸಿದ್ದಾರೆಂದು ತಿಳಿಯುತ್ತದೆ ಎಂದು ಜಸ್ಟಿಸ್ ರಜನೀಶ್ ಓಸ್ವಾಲ್ ಹೇಳಿದರು.
"ಲಭ್ಯ ಮೂಲವೊಂದು ನೀಡಿದ ಮಾಹಿತಿಯ ಆಧಾರದಲ್ಲಿ ವರದಿ ಪ್ರಕಟಿಸಿ ತಮ್ಮ ಕರ್ತವ್ಯ ನಿಭಾಯಿಸಿದ ಪತ್ರಕರ್ತರೊಬ್ಬರ ವಿರುದ್ಧ ಎಫ್ಐಆರ್ ದಾಖಲಿಸಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂಕೋಲೆ ಹಾಕುವ ಹಾಗಿಲ್ಲ" ಎಂದು ನ್ಯಾಯಾಲಯ ಹೇಳಿದೆ.
ಸ್ಥಳೀಯ ಸುದ್ದಿಪತ್ರಿಕೆ ಆರ್ಲಿ ಟೈಮ್ಸ್ ಹಾಗೂ ಟೈಮ್ಸ್ ನೌ ಗೆ ಕಾರ್ಯನಿರ್ವಹಿಸುವ ನಾಯ್ಕ್ ಅವರು "ಕೀಶ್ಟ್ವರ್ ಪೊಲೀಸರಿಂದ ಐದು ಮಕ್ಕಳ ತಂದೆಗೆ ಬರ್ಬರ ಹಿಂಸೆ" ಎಂಬ ಶೀರ್ಷಿಕೆಯ ವರದಿಯನ್ನು 2018ರಲ್ಲಿ ಪ್ರಕಟಿಸಿದ್ದರು.
ಅಖ್ತರ್ ಹುಸೈನ್ ಎಂಬಾತನಿಗೆ ಕಸ್ಟಡಿಯಲ್ಲಿ ಹಿಂಸಿಸಲಾಗಿದೆ ಎಂದು ಆರೋಪಿಸಲಾದ ಈ ಪ್ರಕರಣಕ್ಕೆ ಸಂಬಂಧಿಸಿದ್ದ ವರದಿಯನ್ನು ನಾಯ್ಕ್ ಪ್ರಕಟಿಸಿದ್ದರಲ್ಲದೆ ಆ ವರದಿಯಲ್ಲಿ ಸಂತ್ರಸ್ತನ ಸೋದರ ಕೀಶ್ಟ್ವರ್ ಎಸ್ಪಿ, ಡಿವೈಎಸ್ಪಿ ಹಾಗೂ ಠಾಣಾಧಿಕಾರಿ ವಿರುದ್ಧ ಆರೋಪ ಹೊರಿಸಿದ್ದನ್ನು ಉಲ್ಲೇಖಿಸಿದ್ದರು.
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾಗುವ ಮೊದಲು ಅಲ್ಲಿ ಜಾರಿಯಲ್ಲಿದ್ದ ದಂಡ ಸಂಹಿತೆಯ ಸೆಕ್ಷನ್ 500, 504 ಹಾಗೂ 505 ಅನ್ವಯ ಪತ್ರಕರ್ತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.