ಲಡಾಖ್ನಲ್ಲಿಯ ಪ್ಯಾಂಗಾಂಗ್ ಸರೋವರಕ್ಕೆ ಅಡ್ಡವಾಗಿ ಸೇತುವೆ ನಿರ್ಮಿಸುತ್ತಿರುವ ಚೀನಾ: ವರದಿ
ಉಪಗ್ರಹ ಚಿತ್ರ(photo:twitter/@detresfa_)
ಹೊಸದಿಲ್ಲಿ,ಜ.3: ಚೀನಾ ಪೂರ್ವ ಲಡಾಖ್ನಲ್ಲಿಯ ಪ್ಯಾಂಗಾಂಗ್ ಸರೋವರಕ್ಕೆ ಅಡ್ಡವಾಗಿ ಸೇತುವೆಯನ್ನು ನಿರ್ಮಿಸುತ್ತಿರಬಹುದು ಎಂದು ಭೂ-ಗುಪ್ತಚರ ತಜ್ಞ ಡೇಮಿಯನ್ ಸೈಮನ್ ಅವರಿಗೆ ಲಭ್ಯವಾಗಿರುವ ಉಪಗ್ರಹ ಚಿತ್ರವೊಂದು ಸೂಚಿಸಿದೆ ಎಂದು ವರದಿಯಾಗಿದೆ.
ಚೀನಾದ ಭೂಪ್ರದೇಶದಲ್ಲಿರುವ ಸರೋವರದ ಭಾಗದಲ್ಲಿ ನಿರ್ಮಿಸಲಾಗುತ್ತಿರುವ ಸೇತುವೆಯು ಅದರ ಎರಡೂ ದಂಡೆಗಳನ್ನು ಸಂಪರ್ಕಿಸುತ್ತದೆ ಮತ್ತು ಸೈನಿಕರನ್ನು ಹಾಗೂ ಭಾರೀ ಶಸ್ತ್ರಾಸ್ತ್ರಗಳನ್ನು ಸಾಗಿಸುವುದನ್ನು ಚೀನಾಕ್ಕೆ ಸಾಧ್ಯವಾಗಿಸುತ್ತದೆ.
ಸರೋವರದ ಕಿರಿದಾದ ಭಾಗಕ್ಕೆ ಅಡ್ಡವಾಗಿ ಸೇತುವೆಯ ನಿರ್ಮಾಣವು ಹೆಚ್ಚುಕಡಿಮೆ ಪೂರ್ಣಗೊಂಡಿರುವುದನ್ನು ಸೈಮನ್ ಅವರ ಟ್ವೀಟ್ ತೋರಿಸಿದೆ.
ಕಳೆದ ವರ್ಷ ಪ್ಯಾಂಗಾಂಗ್ ಸರೋವರದ ದಕ್ಷಿಣ ದಂಡೆಯಲ್ಲಿನ ಪ್ರಮುಖ ಕೈಲಾಸ ಪರ್ವತ ಶ್ರೇಣಿಯ ತುದಿಯನ್ನು ತಲುಪುವ ಮೂಲಕ ಭಾರತೀಯ ಯೋಧರು ಪ್ರದೇಶದಲ್ಲಿ ಚೀನಿ ಪಡೆಗಳ ವಿರುದ್ಧ ಆರಂಭಿಕ ಮೇಲುಗೈ ಸಾಧಿಸಿದ್ದರು.
ಸೇತುವೆಯು ಪೂರ್ಣಗೊಳ್ಳುವುದರೊಂದಿಗೆ ಕಳೆದ ವರ್ಷ ಉಭಯ ದೇಶಗಳ ಪಡೆಗಳ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿದ್ದ ವಿವಾದಾತ್ಮಕ ಪ್ರದೇಶದಲ್ಲಿ ಹೆಚ್ಚವರಿ ಸೈನಿಕರನ್ನು ನಿಯೋಜಿಸಲು ಚೀನಾ ಹೆಚ್ಚುವರಿ ಮಾರ್ಗಗಳನ್ನು ಹೊಂದಲಿದೆ. 2020ರಿಂದ ಪೂರ್ವ ಲಡಾಖ್ನಲ್ಲಿ ಡೆಸ್ಪಾಂಗ್ ಬಯಲಿನಿಂದ ಉತ್ತರದ ಪ್ರದೇಶ ಮತ್ತು ದಕ್ಷಿಣದ ಡೆಮ್ಚಿಕ್ ಪ್ರದೇಶಗಳಲ್ಲಿ 50,000ಕ್ಕೂ ಅಧಿಕ ಸೈನಿಕರನ್ನು ಭಾರತ ಮತ್ತು ಚೀನಾ ನಿಯೋಜಿಸಿವೆ.
ಈ ನಡುವೆ ಅಧಿಕೃತ ಚೀನಿ ಮಾಧ್ಯಮವೊಂದರ ಟ್ವಿಟರ್ ಹ್ಯಾಂಡಲ್ನಲ್ಲಿ ಗಲ್ವಾನ್ ಕಣಿವೆಯಲ್ಲಿ ಚೀನಿ ಧ್ವಜದ ಆರೋಹಣವನ್ನು ತೋರಿಸಿರುವ ವೀಡಿಯೊವನ್ನು ಪೋಸ್ಟ್ ಮಾಡಲಾಗಿದ್ದು,ಚೀನಾ ತನ್ನದೇ ಪ್ರದೇಶದಲ್ಲಿ ಧ್ವಜಾರೋಹಣವನ್ನು ನಡೆಸಿದೆಯೇ ಹೊರತು ವಿವಾದಿತ ಗಲ್ವಾನ್ ಪ್ರದೇಶದಲ್ಲಿ ಅಲ್ಲ ಎಂದು ಸೇನಾ ಮೂಲಗಳು ತಿಳಿಸಿವೆ.