ಕೋವಿಡ್ ಉಲ್ಬಣದ ನಡುವೆಯೇ 10, 12ನೇ ತರಗತಿಗಳ ಎರಡನೇ ಹಂತದ ಪರೀಕ್ಷೆ ನಡೆಸಲು ಸಿಬಿಎಸ್ಇ ಸಜ್ಜು
ಹೊಸದಿಲ್ಲಿ,ಜ.16: ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದ್ದರೆ ಎರಡನೇ ಹಂತದ 10 ಮತ್ತು 12ನೇ ತರಗತಿಗಳ ಪರೀಕ್ಷೆಗಳನ್ನು ನಡೆಸಲು ಕೇಂದ್ರ ಶಿಕ್ಷಣ ಸಚಿವಾಲಯ ಮತ್ತು ಸಿಬಿಎಸ್ಇ ಮಂಡಳಿ ಸಜ್ಜಾಗಿವೆ. ಈ ತರಗತಿಗಳಿಗೆ ಮೊದಲ ಹಂತದ ಪರೀಕ್ಷೆಗಳು ಕಳೆದ ವರ್ಷದ ನವಂಬರ್-ಡಿಸೆಂಬರ್ ನಲ್ಲಿ ನಡೆದಿದ್ದು,ಎರಡನೇ ಹಂತದ ಪರೀಕ್ಷೆಗಳು ಮಾರ್ಚ್-ಎಪ್ರಿಲ್ನಲ್ಲಿ ನಡೆಯಲಿವೆ.
ಕೋವಿಡ್ ಮೂರನೇ ಅಲೆಯು ನಿಯಂತ್ರಣದಲ್ಲಿದೆ ಎಂದು ಆರೋಗ್ಯ ತಜ್ಞರು ಹೇಳಿರುವ ಹಿನ್ನೆಲೆಯಲ್ಲಿ ಎರಡನೇ ಹಂತದ ಮಂಡಳಿ ಪರೀಕ್ಷೆಗಳು ರದ್ದಾಗುವ ಸಾಧ್ಯತೆಗಳು ಕ್ಷೀಣವಾಗಿವೆ. ಆದಾಗ್ಯೂ ಪರೀಕ್ಷೆಗಳಿಗೆ ಹಾಜರಾಗದಿರಲು ನಿರ್ಧರಿಸುವ ವಿದ್ಯಾರ್ಥಿಗಳಿಗೆ ಅವರ ಮೊದಲ ಹಂತದ ಪರೀಕ್ಷಾ ಪರಿಣಾಮಗಳ ಆಧಾರದಲ್ಲಿ ಗ್ರೇಡ್ಗಳನ್ನು ನೀಡಲಾಗುವುದು. ಎರಡನೇ ಹಂತದ ಪರೀಕ್ಷೆಗಳ ಅವಧಿ ಎರಡು ಗಂಟೆಗಳದ್ದಾಗಿದ್ದು, ಪ್ರಶ್ನೆಗಳು ವಿವರಣಾತ್ಮಕವಾಗಿರುತ್ತವೆ.
10 ಮತ್ತು 12ನೇ ತರಗತಿಗಳ ಪರೀಕ್ಷೆಗಳಿಗೆ ಮಾದರಿ ಪ್ರಶ್ನೆಪತ್ರಿಕೆಗಳು ಮತ್ತು ಅಂಕ ನೀಡಿಕೆ ವಿಧಾನವನ್ನು ಮಂಡಳಿಯ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ ಮತ್ತು ಶಾಲೆಗಳಿಗೂ ಸೂಚನೆಗಳನ್ನು ನೀಡಲಾಗಿದೆ ಎಂದು ಸಿಬಿಎಸ್ಇ ಶೈಕ್ಷಣಿಕ ನಿರ್ದೇಶಕ ಡಾ.ಜೋಸೆಫ್ ಇಮ್ಯಾನ್ಯುವೆಲ್ ಅವರು ತಿಳಿಸಿದರು.
ಪರಿಸ್ಥಿತಿಯು ತೀವ್ರ ಹದಗೆಟ್ಟರೆ ಮಾತ್ರ ಎರಡನೇ ಹಂತದ ಪರೀಕ್ಷೆಗಳನ್ನು ನಡೆಸಲಾಗುವುದಿಲ್ಲ. ಮೊದಲ ಹಂತದಲ್ಲಿಯ ಅಂಕಗಳನ್ನೇ ಅಂತಿಮ ಎಂದು ಪರಿಗಣಿಸಲಾಗುವುದು ಮತ್ತು ಅವುಗಳನ್ನು ಆಧರಿಸಿ ಫಲಿತಾಂಶಗಳನ್ನು ಸಿದ್ಧಪಡಿಸಲಾಗುವುದು. ಆದರೆ ಅಂತಹ ಸ್ಥಿತಿ ಉದ್ಭವಿಸದಿದ್ದರೆ ಮತ್ತು ಎರಡನೇ ಹಂತದ ಪರೀಕ್ಷೆಗಳು ಯಶಸ್ವಿಯಾಗಿ ನಡೆದರೆ ಇವೆರಡೂ ಅವಧಿಗಳ 50-50 ಶೇಕಡಾ ಅಂಕಗಳ ಆಧಾರದಲ್ಲಿ ಅಂತಿಮ ಫಲಿತಾಂಶವನ್ನು ನಿರ್ಧರಿಸಲಾಗುವುದು ಎಂದು ಸಿಬಿಎಸ್ಇ ಪರೀಕ್ಷಾ ನಿಯಂತ್ರಕ ಸಂಯಮ ಭಾರದ್ವಾಜ್ ತಿಳಿಸಿದರು.
ಮಂಡಳಿ ಪರೀಕ್ಷೆಗಳಿಗೆ ಸುರಕ್ಷಿತವಾಗಿ ಹಾಜರಾಗುವಂತಾಗಲು 15ರಿಂದ 18 ವರ್ಷ ವಯೋಮಾನದ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡಿಕೆಗೆ ಕೇಂದ್ರ ಶಿಕ್ಷಣ ಸಚಿವಾಲಯ ಮತ್ತು ಆರೋಗ್ಯ ಸಚಿವಾಲಯ ವಿಶೇಷ ಗಮನವನ್ನು ನೀಡುತ್ತಿವೆ.
ಮಕ್ಕಳ ಆರೋಗ್ಯಕ್ಕೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ ಎಂದು ಹೇಳಿರುವ ಶಿಕ್ಷಣ ಸಚಿವಾಲಯವು,ಎಲ್ಲ ಕೋವಿಡ್ ಶಿಷ್ಟಾಚಾರಗಳ ಕಟ್ಟುನಿಟ್ಟಿನ ಪಾಲನೆಯೊಂದಿಗೆ ಸಿಬಿಎಸ್ಇ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಶೀಘ್ರವೇ ‘ಪರೀಕ್ಷಾ ಪೆ ಚರ್ಚಾ ’ ಕಾರ್ಯಕ್ರಮವನ್ನು ನಡೆಸಲಿದ್ದು,ಅದಕ್ಕಾಗಿ ಹೆಚ್ಚೆಚ್ಚು ವಿದ್ಯಾರ್ಥಿಗಳು,ಶಿಕ್ಷಕರು ಮತ್ತು ಪೋಷಕರು ನೋಂದಾಯಿಸಿಕೊಳ್ಳುವಂತೆ ಉತ್ತೇಜಿಸಲಾಗುತ್ತಿದೆ ಎಂದು ತಿಳಿಸಿದೆ.