ಪ್ರಧಾನಿಯ ಮೋದಿ ಕುರಿತು ವ್ಯಂಗ್ಯ: "ಝೀ ವಾಹಿನಿ ಕ್ಷಮೆಯಾಚಿಸಬೇಕು" ಎಂದು ತ.ನಾ ಬಿಜೆಪಿ ಒತ್ತಾಯ
ಚೆನ್ನೈ: ಝೀ ಎಂಟರ್ಟೈನ್ಮೆಂಟ್ ತನ್ನ ತಮಿಳು ವಾಹಿನಿ ಮೂಲಕ ತನ್ನ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಕುರಿತು ಮಾಡಿದೆಯೆನ್ನಲಾದ ಅನುಚಿತ ಹೇಳಿಕೆಗಳಿಗೆ ಕ್ಷಮೆಯಾಚಿಸಬೇಕು ಎಂದು ತಮಿಳುನಾಡು ಬಿಜೆಪಿ ಘಟಕ ಆಗ್ರಹಿಸಿದೆ.
ಆದರೆ ಈ ಕುರಿತಂತೆ ತಾವು ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ಝೀ ತಮಿಳು ವಕ್ತಾರರೊಬ್ಬರು ಹೇಳಿದ್ದಾರೆ.
ಝೀ ವಾಹಿನಿ ಜನವರಿ 15ರಂದು ಪ್ರಸಾರವಾದ ತನ್ನ ಜೂನಿಯರ್ ಸೂಪರ್ ಸ್ಟಾರ್ಸ್ ಸೀಸನ್ 4 ಕಾರ್ಯಕ್ರಮದಲ್ಲಿ ಅಮಾನ್ಯೀಕರಣ, ಪ್ರಧಾನಿಯ ವಿದೇಶ ಪ್ರಯಾಣ, ಅವರ ಉಡುಗೆತೊಡುಗೆಗಳು, ಸರಕಾರದ ಡಿಸ್ಇನ್ವೆಸ್ಟ್ಮೆಂಟ್ ನೀತಿಗಳ ಕುರಿತಂತೆ ನಿಂದನಾತ್ಮಕ ಹೇಳಿಕೆಗಳನ್ನು ನೀಡಿದೆ ಎಂದು ಝೀ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ರಾಜ್ಯ ಬಿಜೆಪಿ ಐಟಿ ಘಟಕದ ಅಧ್ಯಕ್ಷ ಸಿ ಟಿ ಆರ್ ನಿರ್ಮಲ್ ಕುಮಾರ್ ಹೇಳಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಈ ಕುರಿತು ಈ ಹಿಂದೆಯೇ ಟ್ವೀಟ್ ಮಾಡಿ ʼಕೇಂದ್ರ ಸಚಿವ ಎಲ್ ಮುರುಗನ್ ತಮಗೆ ಪ್ರಧಾನಿಯನ್ನು ವ್ಯಂಗ್ಯವಾಡಿದ ಝೀ ರಿಯಾಲಿಟಿ ಶೋ ಬಗ್ಗೆ ಕೇಳಿ ಅದರ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದರುʼ ಎಂದಿದ್ದಾರೆ. ಇಂತಹ ವಿಚಾರಗಳನ್ನು ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲು ಅನುಮತಿಸಿದವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.