ಏಳಂತಸ್ತಿನ ಹಾಸ್ಟೆಲ್ ಕಟ್ಟಡದಿಂದ ಜಿಗಿದು ಐಐಟಿ-ಬಾಂಬೆ ವಿದ್ಯಾರ್ಥಿಯ ಆತ್ಮಹತ್ಯೆ
ಮುಂಬೈ,ಜ.17: ಐಐಟಿ-ಬಾಂಬೆಯ ವಿದ್ಯಾರ್ಥಿಯೋರ್ವ ಸೋಮವಾರ ನಸುಕಿನಲ್ಲಿ ಪೊವಾಯಿಯಲ್ಲಿನ ತಾನು ವಾಸವಿದ್ದ ಏಳಂತಸ್ತಿನ ಕ್ಯಾಂಪಸ್ ಹಾಸ್ಟೆಲ್ ನ ತಾರಸಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ವಿದ್ಯಾರ್ಥಿ ದರ್ಶನ ಮಾಳವೀಯ (26) ಖಿನ್ನತೆಯಿಂದ ಬಳಲುತ್ತಿದ್ದು,ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿ ಬುಧನ್ ಸಾವಂತ್ ತಿಳಿಸಿದರು.
ತನ್ನ ಸಾವಿಗೆ ಯಾರೂ ಹೊಣೆಯಲ್ಲ ಎಂದು ಮಾಳವೀಯ ತನ್ನ ಕೋಣೆಯ ಫಲಕದಲ್ಲಿ ಬರೆದಿದ್ದ. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದರು.
ಬೆಳಿಗ್ಗೆ ಕಟ್ಟಡದ ಹೊರಗೆ ಬಿದ್ದುಕೊಂಡಿದ್ದ ಮಾಳವೀಯನನ್ನು ಗಮನಿಸಿದ ವಾಚ್ಮನ್ ಸಂಸ್ಥೆಯ ಅಧಿಕಾರಿಗಳಿಗೆ ತಿಳಿಸಿದ್ದು,ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಮೀಪದ ಆಸ್ಪತ್ರೆಗೆ ಆತನನ್ನು ಸಾಗಿಸಲಾಗಿತ್ತಾದರೂ ಆತ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದ್ದರು.
ಮಧ್ಯಪ್ರದೇಶ ಮೂಲಕ ಮಾಳವೀಯ ಕಳೆದ ಜುಲೈನಿಂದ ಸ್ನಾತಕೋತ್ತರ ವ್ಯಾಸಂಗವನ್ನು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದರು.
Next Story