ಭಾರತೀಯತೆಯ ಪ್ರಜ್ಞೆ ಮೆರೆಯಬೇಕಾದ ಗಣರಾಜ್ಯೋತ್ಸವ | Vartha Bharati- ವಾರ್ತಾ ಭಾರತಿ

--

ಭಾರತೀಯತೆಯ ಪ್ರಜ್ಞೆ ಮೆರೆಯಬೇಕಾದ ಗಣರಾಜ್ಯೋತ್ಸವ

ವೈವಿಧ್ಯತೆಯೊಂದಿಗೆ ಏಕತೆ ಮೂಡಿಸುವ ಕಾಳಜಿ ಭಾರತದ ಸಂವಿಧಾನದ್ದಾಗಿದೆ. 73ನೇ ವರ್ಷದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಡೆಯುವ ಎಲ್ಲಾ ಬಗೆಯ ಸಂಭ್ರಮ ಸಡಗರಗಳ ಜೊತೆಗೆ ಸಂವಿಧಾನದ ಮೂಲ ಆಶಯಗಳನ್ನು ಗೌರವಿಸುವ, ಅನುಸರಿಸುವ, ಅನುಷ್ಠಾನಗೊಳಿಸುವ ಕ್ರಿಯೆಯೂ ನಿರಂತರವಾಗಿ ಸಾಗಬೇಕಾಗಿದೆ. ಸ್ವತಂತ್ರ ಭಾರತದ ಅಮೃತ ಮಹೋತ್ಸವ ಕೂಡ ಬಂದಿರುವುದರಿಂದ ದಿನಾಂಕ 26 ನವೆಂಬರ್ 1949ರಂದು ಸಂವಿಧಾನ ರಚನಾ ಸಭೆಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿದ ಎಚ್ಚರಿಕೆಯ ಮಾತುಗಳನ್ನು ನಾವು ಮತ್ತೆ ಮತ್ತೆ ಆಲಿಸಿ, ಹೆಜ್ಜೆ ಇಡಬೇಕಾಗಿದೆ.

‘‘ಕೊನೆಗೊಂಡಿತೊ ಓರೋರ್ವರ

ಗರ್ವದ ಕಾಲ

ಇದು ಸರ್ವರ ಕಾಲ

ಸರ್ವೋದಯ/ ಸರ್ವೋದಯ/

ಸರ್ವೋದಯವೆ ಯುಗಮಂತ್ರ

ಸರ್ವೋದಯವೆ ಸ್ವಾತಂತ್ರ್ಯದ ಶ್ರೀತಂತ್ರ’’

1950 ಜನವರಿ 26ರಂದು ನಮ್ಮ ಭಾರತದ ಸಂವಿಧಾನ ಜಾರಿಗೊಂಡ ಸುದ್ದಿಯನ್ನು ಆಕಾಶವಾಣಿ ಮೂಲಕ ಕೇಳಿ ಸ್ಫೂರ್ತಿಗೊಂಡು ಅಂದೇ ಕವಿ, ವಿಶ್ವಮಾನವತಾವಾದಿ ಕುವೆಂಪು ಅವರು ಸಂಭ್ರಮದಿಂದ ಬರೆದ ‘ಶ್ರೀಸಾಮಾನ್ಯನ ದೀಕ್ಷಾಗೀತೆ’ ಕವನದ ಸಾಲುಗಳಿವು. ಇಡೀ ಭಾರತದಲ್ಲಿ ಅದರಲ್ಲೂ ಸಂವಿಧಾನದ ಆಶಯಗಳನ್ನು ಕುರಿತು ಅಭಿವ್ಯಕ್ತಿಸಿರುವ ಅಪರೂಪದ ಮೊದಲ ಕವಿತೆ ಇದು. ಸಂವಿಧಾನವನ್ನು ಜನಸಾಮಾನ್ಯನ ದೀಕ್ಷಾಗೀತೆ ಎಂದು ಕುವೆಂಪು ಅವರು ಪರಿಭಾವಿಸಿರುವುದೇ ಅತ್ಯಂತ ಮಾರ್ಮಿಕವಾಗಿದೆ.

ಪುರಾಣಗಳಲ್ಲಿ ಜಂಬೂದ್ವೀಪವೆಂದೂ, ಭರತಖಂಡವೆಂದೂ ಕರೆಯಲ್ಪಟ್ಟಿರುವ ನಮ್ಮ ದೇಶ ತನ್ನ ಭೌಗೋಳಿಕ, ಪ್ರಾದೇಶಿಕ, ಭಾಷಿಕ, ಸಾಂಸ್ಕೃತಿಕ. ಧಾರ್ಮಿಕ ಮೊದಲಾದ ವೈವಿಧ್ಯತೆಗಳ ಕಾರಣವಾಗಿಯೆ ಜಗತ್ತಿನ ಕಣ್ಣಿಗೆ ವಿಶೇಷವಾಗಿದೆ. ಈ ವಿಶೇಷ ವೈವಿಧ್ಯತೆಗಳ ಜೊತೆಗೆ ನಮ್ಮಲ್ಲಿ ರೂಢಿಗೊಂಡ ಚಾತುರ್ವರ್ಣ, ಜಾತಿಪದ್ಧತಿ, ಅಸ್ಪಶ್ಯತೆ, ಲಿಂಗತಾರತಮ್ಯ, ವರ್ಗ ಅಸಮಾನತೆಗಳು ಜನರನ್ನು ಶ್ರೇಣೀಕರಿಸಿ, ಕೆಲವರಿಗೆ ಸುಖಸಮೃದ್ಧಿಯನ್ನು, ಹಲವರಿಗೆ ದುಃಖದುಮ್ಮಾನಗಳನ್ನೂ ನೀಡುತ್ತ ಬಂದದ್ದೂ ಇದೆ. ಅದರಲ್ಲೂ ಶಿಕ್ಷಣ, ಭೂಮಿ ಒಡೆತನ, ಸಂಪತ್ತು ಹಾಗೂ ಅಧಿಕಾರ ಕೆಲವರಿಗಷ್ಟೇ ಮೀಸಲಾಗಿತ್ತು. ಇಂತಹ ಅಮಾನವೀಯ, ಅಸಮಾನತೆಯ ತಾರತಮ್ಯಗಳನ್ನು ಧರ್ಮ, ದೇವರು, ಸಂಸ್ಕೃತಿ, ಸಂಪ್ರದಾಯ, ನಂಬಿಕೆ, ಶಾಸ್ತ್ರಗ್ರಂಥಗಳ ಪ್ರಮಾಣದ ನಂಬಿಕೆಯಲ್ಲಿ ಶತಶತಮಾನಗಳಿಂದ ಸಮರ್ಥಿಸುತ್ತ ಬಂದದ್ದು ಮಾತ್ರ ದುರಂತ.

ಬೇರೆ ಬೇರೆ ಕಾಲಘಟ್ಟಗಳಲ್ಲಿ ಸಮಾಜ ಸುಧಾರಕರು ಮಾತ್ರವಲ್ಲದೆ ಇಂತಹ ಅಸಮಾನತೆಗಳನ್ನು ವಿರೋಧಿಸಿ ಕಾಲಕಾಲಕ್ಕೆ ಬೌದ್ಧ, ಜೈನ, ಲಿಂಗಾಯತ, ಸಿಖ್ ಧರ್ಮಗಳು ಮತ್ತು ಹಲವಾರು ಮತಪಂಥಗಳು ಸಮಾನತಾ ಸಂಸ್ಕೃತಿಯನ್ನು ಜನರಲ್ಲಿ ಬಿತ್ತುತ್ತಾ ಬಂದವು. ಆದರೂ ಜಾತಿ, ಅಸ್ಪಶ್ಯತೆ, ಲಿಂಗತಾರತಮ್ಯ, ವರ್ಗ ಅಸಮಾನತೆಗಳು ಉಳಿದು ಬಂದವು.

ಪ್ರಾಚೀನ ಕಾಲದಿಂದಲೂ ಭಾರತದ ಉದ್ದಗಲಕ್ಕೂ ಪ್ರಾದೇಶಿಕವಾಗಿ ನಮ್ಮದೇ ದೇಶದ ವಿವಿಧ ರಾಜರು ಆಡಳಿತ ನಡೆಸಿದ್ದಾರೆ. ಈ ರಾಜರು ತಮ್ಮ ಸಾಮ್ರಾಜ್ಯಗಳ ವಿಸ್ತರಣೆಗಾಗಿ ಹಾಗೂ ತಮ್ಮ ಸಾಮ್ರಾಜ್ಯದ ಜನತೆಯ ಸಂರಕ್ಷಣೆಗಾಗಿ ಪರಸ್ಪರ ಯುದ್ಧ ಮಾಡಿದ್ದಾರೆ, ಹಾಗೆಯೇ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಧರ್ಮ, ನಾಡು, ನುಡಿ, ಸಂಸ್ಕೃತಿಗೆ ತಮ್ಮದೇಯಾದ ಕೊಡುಗೆಗಳನ್ನು ನೀಡಿದ್ದಾರೆ. ರಾಜರ ಆಳ್ವಿಕೆಯ ಕಾಲದ ಚರಿತ್ರೆಯನ್ನು ಗಮನಿಸುವುದಾದರೆ; ರಾಜರನ್ನು ಪ್ರತ್ಯಕ್ಷ ದೇವತೆಗಳೆಂದು ನಂಬಲಾಗುತ್ತಿತ್ತು. ಆ ರಾಜರು ಮಾಡಿದ ಕಾನೂನುಗಳನ್ನು ಜನತೆ ಶಿರಸಾವಹಿಸಿ ಪಾಲಿಸಬೇಕಿತ್ತು. ಅದನ್ನು ಮೀರಿದರೆ ಶಿಕ್ಷೆ ಬಗೆಬಗೆಯಾಗಿತ್ತು. ಚಕ್ರವರ್ತಿ ಆಶೋಕ, ಬರೋಡ ಸಂಸ್ಥಾನದ ಸಯ್ಯಾಜಿರಾವ್ ಗಾಯಕವಾಡ್, ಕೊಲ್ಲಾಪುರ ಸಂಸ್ಥಾನದ ಛತ್ರಪತಿ ಶಾಹೂ, ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಹೀಗೆ ಮೊದಲಾದ ರಾಜರು ಜನಸಾಮಾನ್ಯರ ಪರವಾಗಿ ಆಡಳಿತ ಮಾಡಿದ್ದಾರೆ ಎಂಬುದು ಹೆಮ್ಮೆಯ ಸಂಗತಿ. ಮುಂದೆ ಪರ್ಷಿಯನ್ನರು, ಮೊಘಲರು, ಬ್ರಿಟಿಷರು ಭಾರತಕ್ಕೆ ಆಗಮಿಸಿದರು. ಇವರೆಲ್ಲರೂ ತಮ್ಮ ಜೊತೆಗೆ ತಮ್ಮ ತಮ್ಮ ಮತಧರ್ಮಗಳನ್ನು, ಸಂಸ್ಕೃತಿಯನ್ನು ಹೊತ್ತು ತಂದರು. ಭಾರತದ ಆಡಳಿತದಲ್ಲೂ ತಮ್ಮ ಹಿಡಿತ ಸಾಧಿಸಿದರು. ಇವುಗಳೂ ಕೂಡ ಭಾರತದ ಉದ್ದಗಲಕ್ಕೂ ಜನರ ಮೇಲೆ ಪ್ರಭಾವ ಬೀರಿವೆ. ಜೊತೆಗೆ ಇವರ ಆಳ್ವಿಕೆಯೂ ಕೂಡ ಜನರ ಮೇಲೆ ಪ್ರಭಾವ ಬೀರಿತು.

ಮುಖ್ಯವಾಗಿ ಬ್ರಿಟಿಷರು ಜಾರಿಗೆ ತಂದ ಮುಕ್ತ ಶಿಕ್ಷಣ, ರೈಲ್ವೆ, ಮಾಧ್ಯಮ, ಮುದ್ರಣ ಮೊದಲಾದವು ಹೊಸ ಎಚ್ಚರ ಮೂಡಿಸಿದವು. ಅದರಲ್ಲೂ ಜನತೆಗೆ ತಾವು ಬ್ರಿಟಿಷ್ ವಸಾಹತುಶಾಹಿಯ ಗುಲಾಮಗಿರಿಯ ಬಂಧನದಲ್ಲಿ ಬದುಕುತ್ತಿದ್ದೇವೆ ಎಂಬ ಅರಿವನ್ನು ಉಂಟುಮಾಡಿತು. ಬಿಡುಗಡೆ ಹೊಂದಬೇಕೆಂಬ ಎಚ್ಚರವನ್ನು ಜನತೆಯಲ್ಲಿ ಮೂಡಿಸಿತು. ಇದರಿಂದ ವಸಾಹತುಶಾಹಿ ಆಳ್ವಿಕೆಯಿಂದ ಭಾರತವನ್ನು ವಿಮೋಚನೆಗೊಳಿಸುವ ಕನಸುಗಳು ಮೊಳಕೆಯೊಡೆಯ ತೊಡಗಿದವು. ಸರಿಸುಮಾರು ಇದೇ ಕಾಲಘಟ್ಟದಲ್ಲಿ ಅಕ್ಷರ ಪಡೆದು ಪ್ರಜ್ಞಾವಂತರಾದ ಶೂದ್ರ, ದಲಿತ, ಮಹಿಳಾ ಸಮುದಾಯಗಳೂ ತಮ್ಮ ವಿಮೋಚನೆಗಾಗಿ ಧ್ವನಿ ಎತ್ತಿದವು. ಈ ಸಮುದಾಯಗಳ ವಿಮೋಚನೆಯ ಕನಸು ವಿಭಿನ್ನವಾಗಿತ್ತು. ಬ್ರಿಟಿಷರಿಂದ ವಿಮೋಚನೆ ಹೊಂದುವ ಜೊತೆಜೊತೆಗೆ ಈ ದೇಶದ ಸಾಮಾಜಿಕ ಅಸಮಾನತೆಗಳಾದ ಜಾತಿಪದ್ಧತಿ, ಅಸ್ಪಶ್ಯತೆ, ಲಿಂಗತಾರತಮ್ಯಗಳ ವಿರುದ್ಧ ಕೂಡ ಧ್ವನಿ ಮಾಡಿದವು. ಈ ಎರಡೂ ಹೋರಾಟಗಳ ನೇತಾರರ ಕೂಗು ಒಂದೇ ಆಗಿತ್ತು. ಅದು ಮನುಷ್ಯನ ಸ್ವಾತಂತ್ರ್ಯ, ಸಮಾನತೆ, ಸ್ವಾಭಿಮಾನ ಮತ್ತು ಘನತೆಗೆ ಸಂಬಂಧಿಸಿದುದು. ಈ ಎರಡು ಸ್ವಾತಂತ್ರ್ಯ ಹೋರಾಟ ಧಾರೆಗಳಲ್ಲಿ ಮೊದಲನೆಯ ನೇತೃತ್ವದ ಪ್ರಬಲ ಧ್ವನಿ ಮಹಾತ್ಮ ಗಾಂಧೀಜಿಯವರದಾಗಿತ್ತು. ಎರಡನೆಯ ನೇತೃತ್ವದ ಪ್ರಬಲ ಧ್ವನಿ ಬಾಬಾಸಾಹೇಬ್ ಅಂಬೇಡ್ಕರ್ ಅವರದಾಗಿತ್ತು ಎಂಬುದನ್ನು ನಿಚ್ಚಳವಾಗಿ ಹೇಳಬಹುದು.

ಭಾರತದ ಉದ್ದಗಲಕ್ಕೂ ಸಂಚರಿಸಿದ ಗಾಂಧೀಜಿಯವರು ಬೇರೆ ಬೇರೆ ಪ್ರಾದೇಶಿಕ ಮತ್ತು ಸಾಮಾಜಿಕ ಹಿನ್ನೆಲೆಯ ಜನಸಮುದಾಯವನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದರು. ತಮ್ಮ ಅಹಿಂಸಾಧಾರಿತ ಸತ್ಯಾಗ್ರಹದ ಮೂಲಕ ಬ್ರಿಟಿಷರ ವಿರುದ್ಧ ಸಮರ ಸಾರಿದರು. ಗಾಂಧೀಜಿಯವರ ಕರೆಗೆ ಓಗೊಟ್ಟು ಭಾರತದಾದ್ಯಂತ ಹಿಂದೂ, ಮುಸ್ಲಿಂ, ಕ್ರೈಸ್ತ ಮೊದಲಾದ ಧರ್ಮದವರು ವಿವಿಧ ಹಿನ್ನೆಲೆಯ ಸಮುದಾಯದವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದರು.

ಇನ್ನೊಂದೆಡೆ ಬುದ್ಧ, ಕಬೀರ್, ಜ್ಯೋತಿಬಾ ಫುಲೆ ಮೊದಲಾದ ನೆಲಮೂಲದ ಸಮಾಜ ಸುಧಾರಕರಿಂದ ಪ್ರೇರೇಪಿತರಾದ ಅಂಬೇಡ್ಕರ್ ಶತಶತಮಾನಗಳಿಂದ ದೌರ್ಜನ್ಯ, ಅತ್ಯಾಚಾರ, ಅಸಮಾನತೆಗಳನ್ನೇ ತಮ್ಮ ಮೂಲಗುಣವಾಗಿ ಹೊಂದಿರುವ ಜಾತಿಪದ್ಧತಿ, ಅಸ್ಪಶ್ಯತೆ, ಲಿಂಗತಾರತಮ್ಯ, ವರ್ಗ ಅಸಮಾನತೆಗಳಿಂದ ನೊಂದವರ ವಿಮೋಚನೆ ಕೇವಲ ಬ್ರಿಟಿಷರ ನಿರ್ಗಮನದಿಂದ ಮಾತ್ರವಲ್ಲ ಜಾತಿವಿನಾಶ, ಮಹಿಳಾ ಸಮಾನತೆ, ಭೂಮಿಯ ರಾಷ್ಟ್ರೀಕರಣ, ಸಂಪತ್ತಿನ ಸಮಾನ ಹಂಚಿಕೆಯಂತಹವುಗಳಿಂದ ಮಾತ್ರ ಎಂದು ಪ್ರತಿಪಾದಿಸುತ್ತ ಬ್ರಿಟಿಷರ ಜೊತೆಜೊತೆಗೆ ಈ ದೇಶದ ಪುರೋಹಿತಶಾಹಿ, ಬಂಡವಾಳಶಾಹಿ ಹಾಗೂ ಜಾತಿವಾದಿಗಳ ವಿರುದ್ಧ ಸಮರ ಸಾರಿದರು. ವಿಶೇಷವೆಂದರೆ ಇವುಗಳ ವಿರುದ್ಧದ ಹೋರಾಟಕ್ಕೆ ಅಂಬೇಡ್ಕರ್ ಕೂಡ ಪ್ರಬಲವಾಗಿ ಅಹಿಂಸೆಯನ್ನೇ ಅಸ್ತ್ರವಾಗಿ ಪ್ರತಿಪಾದಿಸಿದುದು ಗಮನಾರ್ಹ. ಅಸಂಖ್ಯಾತ ಜನರ ತ್ಯಾಗ, ಬಲಿದಾನದ ಮೂಲಕ ಆಗಸ್ಟ್ 15, 1947ರಂದು ಭಾರತಕ್ಕೆ ಸ್ವಾತಂತ್ರ್ಯ ದೊರೆಯಿತು. ಸ್ವತಂತ್ರ ಭಾರತದ ಆಡಳಿತ ವ್ಯವಸ್ಥೆ ಹಾಗೂ ಜನತೆಯ ಬದುಕು ಪ್ರಜಾಸತ್ತಾತ್ಮಕವಾಗಿ ಹೇಗಿರಬೇಕೆಂಬ ಮಹಾನ್ ಕನಸು ರೂಪುಗೊಂಡದ್ದು ಭಾರತದ ಸಂವಿಧಾನದ ಮೂಲಕ. ಸ್ವತಂತ್ರ ಭಾರತದ ವಿಸ್ಮಯವೆಂದರೆ ಸಾಮಾಜಿಕ ಸ್ವಾತಂತ್ರ್ಯದ ಬಗೆಗೆ ಧ್ವನಿ ಎತ್ತಿದ ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾದುದು. ‘‘ಯಾವುದೇ ರಕ್ತಪಾತವಿಲ್ಲದೆ ಜನರ ಸಾಮಾಜಿಕ ಮತ್ತು ಆರ್ಥಿಕ ಬದುಕಿನಲ್ಲಿ ಕ್ರಾಂತಿಕಾರಿ ಬದಲಾವಣೆ ತರುವುದೇ ನಿಜವಾದ ಪ್ರಜಾಪ್ರಭುತ್ವ’’ ಎಂದೂ ‘‘ಪ್ರಜಾಪ್ರಭುತ್ವ ಕೇವಲ ಆಡಳಿತ ವಿಧಾನವಲ್ಲ, ಜೀವನ ವಿಧಾನವಾಗಿರಬೇಕು’’ ಎಂದೂ ಪ್ರತಿಪಾದಿಸುತ್ತಿದ್ದ ಅಂಬೇಡ್ಕರ್ ತಮಗೆ ದಕ್ಕಿದ ಈ ರಾಷ್ಟ್ರನಿರ್ಮಾಣದ ಅವಕಾಶವನ್ನು ಸಮರ್ಥವಾಗಿ ನಿಭಾಯಿಸಿದರು.

ನಮ್ಮ ಭಾರತದ ಸಂವಿಧಾನದ ರಚನೆಗೆ ತೆಗೆದುಕೊಂಡ ಅವಧಿ ಎರಡು ವರ್ಷ, ಹನ್ನೊಂದು ತಿಂಗಳು, ಹದಿನೆಂಟು ದಿನಗಳು. ಭಾರತದ ಸಂವಿಧಾನ ಆರಂಭವಾಗುವುದು we (ನಾವು) ಎನ್ನುವ ಪದದೊಡನೆ. ಈ ಪದಕ್ಕೆ ಭಾರತದ ಚರಿತ್ರೆಯಲ್ಲಿ ವಿಶೇಷವಾದ ಮಹತ್ವವಿದೆ. ಯಾಕೆಂದರೆ ಇಡೀ ದೇಶದಾದ್ಯಂತ ಪ್ರಾದೇಶಿಕವಾಗಿ, ಸಂಸ್ಥಾನಗಳಾಗಿ, ಜಾತಿಗಳಾಗಿ, ವರ್ಗಗಳಾಗಿ, ಮತಧರ್ಮಗಳಾಗಿ, ಇನ್ನೂ ಮೊದಲಾಗಿ ಚೂರುಚೂರಾಗಿದ್ದ ಜನತೆಯನ್ನು ‘ನಾವು’ ಎಂಬ ಏಕಪ್ರಜ್ಞೆ ಮೂಡಿಸಿದ್ದು ಸಂವಿಧಾನ. ಇದರಲ್ಲಿ ಭಾರತೀಯರೆಲ್ಲರನ್ನೂ ಒಳಗೊಳ್ಳುವ ವೈಶಾಲ್ಯತೆ ಇದೆ. ಜೊತೆಗೆ ಆರಂಭದಲ್ಲಿ ಉಲ್ಲೇಖಿಸಿದ ಕವಿ ಕುವೆಂಪು ಅವರ ಕವನದ ಸಾಲುಗಳು ಹೇಳುವಂತೆ; ಈವರೆಗೆ ಇದ್ದ ಗರ್ವರ ಕಾಲ (ಜಾತಿಗರ್ವ, ಪುರುಷ ಗರ್ವ, ಜಮೀನ್ದಾರಿ ಗರ್ವ, ಶ್ರೀಮಂತಿಕೆ ಗರ್ವ, ಅಧಿಕಾರದ ಗರ್ವ ಇತ್ಯಾದಿ) ಕೊನೆಗೊಂಡು ಸರ್ವರೂ ಸಮಪಾಲಿನೊಂದಿಗೆ ಸಮಬಾಳನ್ನು ಬಾಳುವ, ಸಾಮೂಹಿಕವಾಗಿ ಪ್ರಗತಿ ಹೊಂದುವ ಆಶಯವಿದೆ, ಸಂವಿಧಾನವು ಭಾರತದ ಎಲ್ಲಾ ಪ್ರಜೆಗಳಿಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ನೀಡಿದೆ. ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯ ಕೊಟ್ಟಿದೆ. ಸ್ಥಾನಮಾನ ಮತ್ತು ಅವಕಾಶಗಳನ್ನು ಸಮಾನತೆಯನ್ನು ಎತ್ತಿ ಹಿಡಿದಿದೆ. ಸಕಲರಿಗೂ ವ್ಯಕ್ತಿಗೌರವ, ದೇಶದ ಏಕತೆ ಮತ್ತು ಸಮಗ್ರತೆಯ ಭಾವನೆ ಮೂಡಿಸಲು ಸೋದರತೆಯ ಭಾವನೆಯನ್ನು ಪ್ರತಿಪಾದಿಸಲಾಗಿದೆ. ವಿಶೇಷವೆಂದರೆ ಭಾರತೀಯ ಪ್ರಜೆಗಳೆಲ್ಲರೂ ತಮಗೆ ತಾವೇ ಒಪ್ಪಿ, ಅರ್ಪಿಸಿಕೊಂಡು ಶಾಸನವಾಗಿ ರೂಪಿಸಿಕೊಂಡಿರುವ ಏಕೈಕ ಗ್ರಂಥವಿದು. ಹೀಗೆ ಒಳಗೊಳ್ಳುವಿಕೆಯ ಸಾಮೂಹಿಕ ಪ್ರಗತಿಯನ್ನು ಪ್ರತಿಪಾದಿಸುವ ಮತ್ತು ಇವುಗಳನ್ನು ಅನುಷ್ಠಾನಗೊಳಿಸಲು ನಿರಂತರವಾಗಿ ಪ್ರೇರೇಪಿಸುವ ಪವಿತ್ರ ಗ್ರಂಥ ನಮ್ಮ ಭಾರತದ ಸಂವಿಧಾನವಾಗಿದೆ. ಇಂತಹ ಘನತೆಯ ಸಂವಿಧಾನ ಸಮರ್ಪಣೆಗೊಂಡದ್ದು 1949 ನವೆಂಬರ್ 26ರಂದು. ಇದನ್ನು ‘ರಾಷ್ಟ್ರೀಯ ಕಾನೂನು ದಿನ’ವೆಂದು ಆಚರಿಸಲಾಗುತ್ತಿತ್ತು. ಈಗ ‘ಸಂವಿಧಾನ ದಿನಾಚರಣೆ’ ಎಂದು ಆಚರಿಸಲಾಗುತ್ತಿದೆ.

ಸಂವಿಧಾನ ಜಾರಿಗೆ ಬಂದದ್ದು 1950 ಜನವರಿ 26ರಂದು. 1930ರ ಜನವರಿ 26ರಂದು ಸಂಪೂರ್ಣ ಸ್ವರಾಜ್ ಚಳವಳಿ ನಡೆದಿತ್ತು. ಅದರ ಸ್ಮರಣೆಗಾಗಿ ಜನವರಿ 26ರಂದು ಸಂವಿಧಾನ ಜಾರಿಗೆ ಬಂತು. ಈ ದಿನವನ್ನು ‘ಗಣರಾಜ್ಯೋತ್ಸವ ದಿನ’ವೆಂದು ಘೋಷಿಸಿ ರಾಷ್ಟ್ರೀಯ ಹಬ್ಬವಾಗಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ನಮ್ಮ ಭಾರತ ಇಂದಿಗೂ ತನ್ನ ವೈವಿಧ್ಯತೆಯನ್ನು ಉಳಿಸಿಕೊಂಡಿದೆ. ವೈವಿಧ್ಯತೆಯೊಂದಿಗೆ ಏಕತೆ ಮೂಡಿಸುವ ಕಾಳಜಿ ಭಾರತದ ಸಂವಿಧಾನದ್ದಾಗಿದೆ. 73ನೇ ವರ್ಷದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಡೆಯುವ ಎಲ್ಲಾ ಬಗೆಯ ಸಂಭ್ರಮ ಸಡಗರಗಳ ಜೊತೆಗೆ ಸಂವಿಧಾನದ ಮೂಲ ಆಶಯಗಳನ್ನು ಗೌರವಿಸುವ, ಅನುಸರಿಸುವ, ಅನುಷ್ಠಾನಗೊಳಿಸುವ ಕ್ರಿಯೆಯೂ ನಿರಂತರವಾಗಿ ಸಾಗಬೇಕಾಗಿದೆ. ಸ್ವತಂತ್ರ ಭಾರತದ ಅಮೃತ ಮಹೋತ್ಸವ ಕೂಡ ಬಂದಿರುವುದರಿಂದ ದಿನಾಂಕ 26 ನವೆಂಬರ್ 1949ರಂದು ಸಂವಿಧಾನ ರಚನಾ ಸಭೆಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿದ ಎಚ್ಚರಿಕೆಯ ಮಾತುಗಳನ್ನು ನಾವು ಮತ್ತೆ ಮತ್ತೆ ಆಲಿಸಿ, ಹೆಜ್ಜೆ ಇಡಬೇಕಾಗಿದೆ. ಆ ಮಾತು ಹೀಗಿದೆ; ‘‘ಚರಿತ್ರೆ ಮತ್ತೆ ಮರುಕಳಿಸುತ್ತದೆಯೇ? ಈ ಯೋಚನೆ ನನ್ನಲ್ಲಿ ಆತಂಕ ಮೂಡಿಸುತ್ತದೆ. ನಮಗೆ ಈಗಾಗಲೇ ಇದ್ದ ಹಳೆಯ ಶತ್ರುಗಳಾದ ಜಾತಿ, ಧರ್ಮಗಳ ಜೊತೆಗೆ ವಿಭಿನ್ನ ಮತ್ತು ವಿರೋಧಿ ರಾಜಕೀಯ ಸಿದ್ಧಾಂತಗಳ ಹಲವು ರಾಜಕೀಯ ಪಕ್ಷಗಳೂ ಸೇರಿಕೊಳ್ಳುತ್ತವೆ. ಈ ವಾಸ್ತವ ಅರಿವಾದ ಕೂಡಲೇ ನನ್ನ ಆತಂಕ ಇನ್ನೂ ತೀವ್ರವಾಗುತ್ತದೆ. ಭಾರತೀಯರು ದೇಶವನ್ನು ತಮ್ಮ ಮತಧರ್ಮಗಳಿಗಿಂತ ಮುಖ್ಯವೆಂದು ಭಾವಿಸುತ್ತಾರೆಯೇ ಅಥವಾ ಅವರಿಗೆ ತಮ್ಮ ದೇಶಕ್ಕಿಂತ ತಮ್ಮ ಮತಧರ್ಮಗಳೇ ಹೆಚ್ಚು ಮುಖ್ಯವಾಗುತ್ತದೋ? ನನಗೆ ಗೊತ್ತಾಗುತ್ತಿಲ್ಲ. ಆದರೆ ಇಷ್ಟಂತೂ ಖಚಿತ, ರಾಜಕೀಯ ಪಕ್ಷಗಳು ಜಾತಿಧರ್ಮವನ್ನೇ ದೇಶಕ್ಕಿಂತ ಮುಖ್ಯ ಎಂದು ಭಾವಿಸಿದರೆ ನಮ್ಮ ಸ್ವಾತಂತ್ರ್ಯಕ್ಕೆ ಎರಡನೇ ಬಾರಿ ಗಂಡಾಂತರ ಬಂದಂತೆ. ಹಾಗೇನಾದರೂ ಆದರೆ ಬಹುಶಃ ಸ್ವಾತಂತ್ರ್ಯ ಅನ್ನುವುದು ನಮಗೆ ಮತ್ತೆ ಸಿಗುವುದಿಲ್ಲ. ಅದನ್ನು ಶಾಶ್ವತವಾಗಿ ಕಳೆದುಕೊಂಡು ಬಿಡುತ್ತೇವೆ. ಇದರ ವಿರುದ್ಧ ನಾವೆಲ್ಲರೂ ಅಚಲವಾಗಿ ನಿಲ್ಲಬೇಕು. ನಮ್ಮಲ್ಲಿ ಕೊನೆಯ ಹನಿ ರಕ್ತ ಇರುವವರೆಗೂ ನಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ದೃಢಸಂಕಲ್ಪಮಾಡಬೇಕು’’

ರಾಷ್ಟ್ರಪ್ರೇಮಿ ಅಂಬೇಡ್ಕರ್ ಅವರ ಈ ಆತಂಕದ ಮಾತುಗಳನ್ನು ಅಂತರ್ಗತ ಮಾಡಿಕೊಳ್ಳುವ ಮೂಲಕ 73ನೇ ಗಣರಾಜ್ಯೋತ್ಸವದೊಂದಿಗೆ ಸ್ವತಂತ್ರ ಭಾರತದ ಅಮೃತ ಮಹೋತ್ಸವವನ್ನು ಅರ್ಥಪೂರ್ಣಗೊಳಿಸುವ ಪ್ರಬುದ್ಧ ದಿಕ್ಕಿನತ್ತ ನಾವೆಲ್ಲ ಸಾಗಬೇಕಾಗಿದೆ. ನಾವು ಭಾರತೀಯರು ಎಂಬ ಘನತೆಯನ್ನು ಮೆರೆಯುತ್ತ, ಒಳಗೊಳ್ಳುವಿಕೆಯ ಸಾಮೂಹಿಕ ಪ್ರಗತಿಯನ್ನು ಇನ್ನಷ್ಟು ಸಾಧಿಸಬೇಕಾಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top