ಹಿರಿಯ ಗಾಯಕಿ ಲತಾ ಮಂಗೇಶ್ಕರ್ ದೇಹಸ್ಥಿತಿ ಗಂಭೀರ: ವೈದ್ಯರಿಂದ ಮಾಹಿತಿ
ಮುಂಬೈ, ಫೆ.3: ಕಳೆದ ತಿಂಗಳಿನಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅವರ ದೇಹಸ್ಥಿತಿ ಮತ್ತೊಮ್ಮೆ ಬಿಗಡಾಯಿಸಿದೆೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡ ತಿಳಿಸಿದೆ.
"ಲತಾ ಮಂಗೇಶ್ಕರ್ ಅವರ ದೇಹಸ್ಥಿತಿ ಮತ್ತೊಮ್ಮೆ ಹದಗೆಟ್ಟಿದೆ ಹಾಗೂ ಆಕೆ ಈಗ ಕೃತಕ ಉಸಿರಾಟ ವ್ಯವಸ್ಥೆಯಲ್ಲಿದ್ದಾರೆ ಹಾಗೂ ಅವರ ಸ್ಥಿತಿ ಚಿಂತಾಜನಕವಾಗಿದೆ’’ ಎಂದು ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಡಾ. ಪ್ರತೀತ್ ಸಾಮದಾನಿ ತಿಳಿಸಿದ್ದಾರೆ. ಕಳೆದ ವಾರ 92 ವರ್ಷ ವಯಸ್ಸಿನ ಲತಾಮಂಗೇಶ್ಕರ್ ಕೋವಿಡ್ ಸೋಂಕಿಗೊಳಗಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ಜನವರಿ 11ರಂದು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಳೆದ ವಾರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದರಿಂದ ಅವರಿಗೆ ಆಳವಡಿಸಲಾಗಿದ್ದ ವೆಂಟಿಲೇಟರ್ ವ್ಯವಸ್ಥೆಯನ್ನು ತೆಗೆದುಹಾಕಲಾಗಿತ್ತು.
ಇಂದು ಲತಾ ಮಂಗೇಶ್ಕರ್ ಅವರ ಆರೋಗ್ಯಸ್ಥಿತಿಯ ಬಗ್ಗೆ ಆಸ್ಪತ್ರೆಯ ಆವರಣದಲ್ಲಿ ಮಾಧ್ಯಮಗಳಿಗೆ ವಿವರಣೆ ನೀಡಿದ ಡಾ. ಪ್ರತೀತ್ ಅವರು ‘‘ನಾವು ಆಕೆಗೆ ಚಿಕಿತ್ಸೆ ನೀಡುತ್ತಿದ್ದೇವೆ. ಆಕೆಯ ಪರಿಸ್ಥಿತಿ ಚಿಂತಾಜನಕವಾಗಿದೆ. ಆದರೆ ಆದರೆ ಆಕೆ ಸಹಿಸಿಕೊಳ್ಳುತ್ತಿದ್ದಾರೆ ಮತ್ತು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ’’ ಎಂದರು.
ಗಾನಕೋಗಿಲೆ ಎಂದೇ ಖ್ಯಾತರಾದ ಲತಾಮಂಗೇಶ್ಕರ್ ಅವರು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತರತ್ನ ಪುರಸ್ಕೃತರಾಗಿದ್ದಾರೆ. 25 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಲತಾ ಮಂಗೇಶ್ಕರಂ ಅವರನ್ನು ಪದ್ಮಭೂಷಣ, ಪದ್ಮವಿಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಅವರು ಹಲವಾರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಕೂಡಾ ಪಡೆದಿದ್ದಾರೆ.