--

ಸೌದಿ ಕಾರ್ಯಕರ್ತೆಯ ಐಫೋನ್‌ನಲ್ಲಿದ್ದ ʼಪೆಗಾಸಸ್‌ʼನ ನಿಗೂಢ ಜಾಲವನ್ನು ಬಯಲುಗೊಳಿಸಿದ್ದು ಹೇಗೆ?

Photo: Marieke Wijntjes/Reuters

 ವಾಷಿಂಗ್ಟನ್,ಫೆ.19: ವಿಶ್ವದ ಅತ್ಯಂತ ಅತ್ಯಾಧುನಿಕ ಸ್ಪೈವೇರ್ ಕಂಪನಿಗಳಲ್ಲೊಂದಾಗಿರುವ ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ನ ವಿರುದ್ಧ ಅಲೆಯನ್ನು ಹುಟ್ಟುಹಾಕುವಲ್ಲಿ ಒಬ್ಬರೇ ಕಾರ್ಯಕರ್ತೆ ನೆರವಾಗಿದ್ದರು. ವಿಶ್ವಾದ್ಯಂತ ಸರಕಾರಿ ಅಧಿಕಾರಿಗಳು ಮತ್ತು ಭಿನ್ನಮತೀಯರನ್ನು ಹ್ಯಾಕ್ ಮಾಡಲು ಎನ್‌ಎಸ್‌ಒದ ಪೆಗಾಸಸ್ ಸ್ಪೈವೇರ್‌ನ್ನು ಬಳಸಲಾಗಿದ್ದು,ಕಂಪನಿಯು ಈಗ ಅಮೆರಿಕದಲ್ಲಿ ಸರಣಿ ಕಾನೂನು ಕ್ರಮಗಳನ್ನು ಎದುರಿಸುತ್ತಿದೆ ಮತ್ತು ಅದರ ಕಾರ್ಯ ಚಟುವಟಿಕೆಗಳು ಸರಕಾರದ ನಿಗಾದಲ್ಲಿವೆ.

ಇವೆಲ್ಲವೂ ಆರಂಭವಾಗಿದ್ದು ಸೌದಿ ಅರೇಬಿಯದ ಮಹಿಳಾ ಹಕ್ಕುಗಳ ಕಾರ್ಯಕರ್ತೆ ಲೂಜೈನ್ ಅಲ್-ಹತ್ಲೋಲ್ ಅವರ ಐಫೋನ್‌ನಲ್ಲಿಯ ಸಾಫ್ಟ್‌ವೇರ್ ದೋಷದಿಂದಾಗಿ...

ಘಟನೆಯಲ್ಲಿ ಭಾಗಿಯಾಗಿದ್ದ ಆರು ಜನರು ಹೇಳಿರುವಂತೆ ಪೆಗಾಸಸ್‌ನಲ್ಲಿಯ ದೋಷವು ಎನ್‌ಎಸ್‌ಒ ಗ್ರೂಪ್ ತನ್ನ ಐಫೋನ್‌ನ್ನು ಹ್ಯಾಕ್ ಮಾಡಲು ನೆರವಾಗಿತ್ತು ಎನ್ನುವುದನ್ನು ಸೂಚಿಸುವ ಹಲವಾರು ಸಾಕ್ಷಾಧಾರಗಳನ್ನು ಪತ್ತೆ ಹಚ್ಚಲು ಅಲ್-ಹತ್ಲೋಲ್ ಮತ್ತು ಖಾಸಗಿತನ ಸಂಶೋಧಕರಿಗೆ ಅನುವು ಮಾಡಿಕೊಟ್ಟಿತ್ತು. ಪೆಗಾಸಸ್ ಪ್ರಮಾದವಶಾತ್ ಹಿಂದೆ ಬಿಟ್ಟಿದ್ದ ಅವರ ಫೋನ್‌ನಲ್ಲಿಯ ನಿಗೂಢ ನಕಲಿ ಚಿತ್ರವೊಂದು ಭದ್ರತಾ ಸಂಶೋಧಕರಿಗೆ ಸುಳಿವು ನೀಡಿತ್ತು.

ಅಲ್-ಹತ್ಲೋಲ್ ಅವರ ಫೋನ್‌ನಿಂದ ಬಯಲಿಗೆ ಬಂದಿದ್ದ ಈ ಅಂಶವು ಕಳೆದ ವರ್ಷ ಎನ್‌ಎಸ್‌ಒ ವಿರುದ್ಧ ಕಾನೂನು ಮತ್ತು ಸರಕಾರಿ ಕ್ರಮಗಳ ಬಿರುಗಾಳಿಯನ್ನೇ ಸೃಷ್ಟಿಸಿತ್ತು.

ಸೌದಿ ಅರೇಬಿಯದ ಅತ್ಯಂತ ಪ್ರತಿಷ್ಠಿತ ಸಾಮಾಜಿಕ ಹೋರಾಟಗಾರರಲ್ಲಿ ಓರ್ವರಾಗಿರುವ ಅಲ್-ಹತ್ಲೋಲ್ ಸೌದಿಯಲ್ಲಿ ಮಹಿಳಾ ಚಾಲಕಿಯರ ಮೇಲಿನ ನಿಷೇಧವನ್ನು ಅಂತ್ಯಗೊಳಿಸಲು ಅಭಿಯಾನವನ್ನು ಮುನ್ನಡೆಸಲು ನೆರವಾಗಿದ್ದರು. ರಾಷ್ಟ್ರೀಯ ಭದ್ರತೆಗೆ ಹಾನಿಯನ್ನುಂಟು ಮಾಡಿದ್ದ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ ಅವರನ್ನು 2021,ಫೆಬ್ರವರಿಯಲ್ಲಿ ಜೈಲಿನಿಂದ ಬಿಡುಗಡೆಗೊಳಿಸಲಾಗಿತ್ತು.

ಇದರ ಬೆನ್ನಲ್ಲೇ ಸರಕಾರಿ ಬೆಂಬಲಿತ ಹ್ಯಾಕರ್‌ಗಳು ನಿಮ್ಮ ಜಿಮೇಲ್ ಖಾತೆಯನ್ನು ಪ್ರವೇಶಿಸಲು ಪ್ರಯತ್ನಿಸಿದ್ದರು ಎಂಬ ಎಚ್ಚರಿಕೆಯ ಇಮೇಲ್ ಸಂದೇಶವನ್ನು ಗೂಗಲ್ ಅಲ್-ಹತ್ಲೋಲ್‌ಗೆ ರವಾನಿಸಿತ್ತು. ತನ್ನ ಐಫೋನ್ ಕೂಡ ಹ್ಯಾಕ್ ಆಗಿರಬಹುದೆಂಬ ಆತಂಕದಿಂದ ಕೆನಡಾದ ಖಾಸಗಿತನ ಹಕ್ಕುಗಳ ಗುಂಪು ಸಿಟಿಝನ್ ಲ್ಯಾಬ್‌ನ್ನು ಸಂಪರ್ಕಿಸಿದ್ದ ಅವರು ಪುರಾವೆಗಾಗಿ ತನ್ನ ಫೋನ್ ಅನ್ನು ತನಿಖೆಗೊಳಪಡಿಸುವಂತೆ ಕೋರಿಕೊಂಡಿದ್ದರು.

ಅಲ್-ಹತ್ಲೋಲ್‌ರ ಐಫೋನ್‌ನ್ನು ಆರು ತಿಂಗಳ ಕಾಲ ಕೂಲಂಕಶವಾಗಿ ಪರಿಶೀಲಿಸಿದ್ದ ಸಿಟಿಝನ್ ಲ್ಯಾಬ್‌ನ ಸಂಶೋಧಕ ಬಿಲ್ ಮಾರ್ಕ್‌ಝಾಕ್ ಅವರು ಸಾಫ್ಟ್‌ವೇರ್ ದೋಷವನ್ನು ಪತ್ತೆ ಹಚ್ಚಿದ್ದರು ಮತ್ತು ಅದನ್ನು ಅವರು ‘ಅಭೂತಪೂರ್ವ ಆವಿಷ್ಕಾರ’ಎಂದು ಬಣ್ಣಿಸಿದ್ದರು. ಅಲ್-ಹತ್ಲೋಲ್ ಅವರ ಫೋನ್‌ನಲ್ಲಿ ಸೇರಿಸಲಾಗಿದ್ದ ಕಣ್ಗಾವಲು ಸಾಫ್ಟ್‌ವೇರ್ ತನ್ನ ಗುರಿಯ ಸಂದೇಶಗಳನ್ನು ಕದ್ದ ಬಳಿಕ ಅದರ ಕಾರ್ಯ ನಿರ್ವಹಣೆಯಲ್ಲಿನ ದೋಷವು ದುರುದ್ದೇಶಪೂರಿತ ಇಮೇಜ್ ಫೈಲ್‌ನ್ನು ಸ್ವಯಂ ಅಳಿಸುವ ಬದಲು ಅದರ ಪ್ರತಿಯನ್ನು ಹಾಗೆಯೇ ಉಳಿಸಿತ್ತು.

ದಾಳಿಯ ಬಳಿಕ ಕಂಪ್ಯೂಟರ್ ಕೋಡ್ ಅನ್ನು ಹಾಗೆಯೇ ಬಿಟ್ಟಿದ್ದು ಪತ್ತೆಯಾದಾಗ ಅದು ಎನ್‌ಎಸ್‌ಒ ಬೇಹುಗಾರಿಕೆ ತಂತ್ರಾಂಶವನ್ನು ನಿರ್ಮಿಸಿದೆ ಎನ್ನುವುದಕ್ಕೆ ನೇರ ಪುರಾವೆಯಾಗಿತ್ತು ಎಂದು ಹೇಳಿದ ಮಾರ್ಕ್‌ಝಾಕ್,‘‘ಅದೊಂದು ‘ಗೇಮ್ ಚೇಂಜರ್’ ಆಗಿತ್ತು. ಕಂಡು ಹಿಡಿಯಲು ಸಾಧ್ಯವಿಲ್ಲ ಎಂದು ಕಂಪನಿಯು ಭಾವಿಸಿದ್ದನ್ನು ನಾವು ಕಂಡು ಹಿಡಿದಿದ್ದೆವು ’’ ಎಂದಿದ್ದಾರೆ. ಮೂಲಗಳಂತೆ ಈ ಶೋಧವು ಹ್ಯಾಕಿಂಗ್ ಬ್ಲೂಪ್ರಿಂಟ್‌ಗೆ ಸಮವಾಗಿತ್ತು ಮತ್ತು ಆ್ಯಪಲ್ ವಿಶ್ವಾದ್ಯಂತ ಇತರ ಸರಕಾರಿ ಬೆಂಬಲಿತ ಹ್ಯಾಕಿಂಗ್‌ಗೆ ಬಲಿಪಶುಗಳಾಗಿದ್ದ ಸಾವಿರಾರು ಜನರ ಗಮನಕ್ಕೆ ಈ ವಿಷಯವನ್ನು ತರಲು ಕಾರಣವಾಗಿತ್ತು.

ಸಿಟಿಝನ್ ಲ್ಯಾಬ್ ಮತ್ತು ಅಲ್-ಹತ್ಲೋಲ್ ಅವರ ಶೋಧವು 2021 ನವಂಬರ್‌ನಲ್ಲಿ ಆ್ಯಪಲ್ ಎನ್‌ಎಸ್‌ಒ ವಿರುದ್ಧ ದಾಖಲಿಸಿದ ಮೊಕದ್ದಮೆಗೆ ಆಧಾರವಾಗಿತ್ತು ಮತ್ತು ಇದು ವಾಷಿಂಗ್ಟನ್‌ನಲ್ಲಿಯೂ ಪ್ರತಿಧ್ವನಿಸಿತ್ತು. ತಮ್ಮ ರಾಜತಾಂತ್ರಿಕರ ಮೇಲೂ ಕಣ್ಗಾವಲು ಇರಿಸಲು ಪೆಗಾಸಸ್‌ನ್ನು ಬಳಸಲಾಗಿತ್ತು ಎನ್ನುವುದು ಅಮೆರಿಕದ ಅಧಿಕಾರಿಗಳಿಗೆ ಗೊತ್ತಾಗಿತ್ತು. ಕಂಪನಿಯು ತಾನು ಸರಕಾರ,ಕಾನೂನು ಜಾರಿ ಮತ್ತು ಗುಪ್ತಚರ ಏಜೆನ್ಸಿಗಳಿಗೆ ಮಾರಾಟ ಮಾಡುವ ಹ್ಯಾಕಿಂಗ್ ಸಾಧನಗಳನ್ನು ಸ್ವತಃ ನಿರ್ವಹಿಸುವುದಿಲ್ಲ ಎಂದು ಎನ್‌ಎಸ್‌ಒ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೆ ಅಲ್-ಹತ್ಲೋಲ್ ಅಥವಾ ಇತರ ಕಾರ್ಯಕರ್ತರನ್ನು ಗುರಿಯಾಗಿಸಿಕೊಳ್ಳಲು ಪೆಗಾಸಸ್‌ನನ್ನು ಬಳಸಲಾಗಿತ್ತೇ ಎಂಬ ಕುರಿತು ಪ್ರಶ್ನೆಗಳಿಗೆ ಅವರು ಉತ್ತರಿಸಿಲ್ಲ.

ಅಲ್-ಹತ್ಲೋಲ್ ಶಂಕೆಗೆ ಗುರಿಯಾಗಲು ಉತ್ತಮ ಕಾರಣಗಳನ್ನು ಹೊಂದಿದ್ದರು,ಅವರು ಕಣ್ಗಾವಲಿಗೆ ಒಳಗಾಗಿದ್ದು ಇದೇ ಮೊದಲ ಸಲವಾಗಿರಲಿಲ್ಲ.
  
2017ರಲ್ಲಿ ಸಂಯುಕ್ತ ಅರಬ್ ಗಣರಾಜ್ಯಕ್ಕಾಗಿ ‘ಪ್ರಾಜೆಕ್ಟ್ ರ್ಯಾವೆನ್ ’ ಎಂಬ ರಹಸ್ಯ ಕಾರ್ಯಕ್ರಮದಡಿ ಭಿನ್ನಮತೀಯರ ಮೇಲೆ ಕಣ್ಗಾವಲು ಇರಿಸಿದ್ದ ಅಮೆರಿಕದ ವೃತ್ತಿಪರ ತಂಡವೊಂದು ಅಲ್-ಹತ್ಲೋಲ್ ಅವರನ್ನು ಗುರಿಯಾಗಿಸಿಕೊಂಡಿತ್ತು ಮತ್ತು ಅವರನ್ನು ‘ರಾಷ್ಟ್ರೀಯ ಭದ್ರತಾ ಬೆದರಿಕೆ ’ಯನ್ನಾಗಿ ವರ್ಗೀಕರಿಸಿತ್ತು ಹಾಗೂ ಅವರ ಐ ಫೋನ್‌ನ್ನು ಹ್ಯಾಕ್ ಮಾಡಿತ್ತು ಎನ್ನುವುದನ್ನು 2019ರ ರೂಟರ್ಸ್ ತನಿಖೆಯೊಂದು ಬಹಿರಂಗಗೊಳಿಸಿತ್ತು.

ಸೌದಿಯಲ್ಲಿ ಅಲ್-ಹತ್ಲೋಲ್ ಅವರನ್ನು ಬಂಧಿಸಿ ಸುಮಾರು ಮೂರು ವರ್ಷಗಳ ಕಾಲ ಜೈಲಿನಲ್ಲಿರಿಸಲಾಗಿತ್ತು. ಅಲ್ಲಿ ಅವರಿಗೆ ಚಿತ್ರಹಿಂಸೆ ನೀಡಲಾಗಿತ್ತು ಮತ್ತು ಅವರ ಫೋನ್‌ನಿಂದ ಕದ್ದಿದ್ದ ಮಾಹಿತಿಗಳನ್ನು ಬಳಸಿಕೊಂಡು ವಿಚಾರಣೆಗೊಳಪಡಿಸಲಾಗಿತ್ತು ಎಂದು ಅಲ್-ಹತ್ಲೋಲ್ ಕುಟುಂಬವು ಹೇಳಿದೆ. 2021,ಫೆಬ್ರವರಿಯಲ್ಲಿ ಅಲ್-ಹತ್ಲೋಲ್‌ರನ್ನು ಬಿಡುಗಡೆಗೊಳಿಸಲಾಗಿತ್ತು ಮತ್ತು ಅವರು ದೇಶವನ್ನು ತೊರೆಯುವುದನ್ನು ನಿಷೇಧಿಸಲಾಗಿದೆ.

ಅಲ್-ಹತ್ಲೋಲ್ ಅವರ ಕಣ್ಗಾವಲು ಅನುಭವ ಮತ್ತು ಜೈಲುವಾಸ ಈ ಸ್ಪೈವೇರ್‌ನ್ನು ಬಳಸುವವರ ವಿರುದ್ಧ ಪುರಾವೆಗಳನ್ನು ಸಂಗ್ರಹಿಸಲು ಅವರು ನಿರ್ಧರಿಸುವಂತೆ ಮಾಡಿದ್ದವು ಎಂದು ಸೋದರಿ ಲೀನಾ ಅಲ್-ಹತ್ಲೋಲ್ ತಿಳಿಸಿದರು. ಸಿಟಿಝನ್ ಲ್ಯಾಬ್ ಅಲ್-ಹತ್ಲೋಲ್‌ರ ಐಫೋನ್‌ನಲ್ಲಿ ಪತ್ತೆ ಹಚ್ಚಿದ್ದ ಸ್ಪೈವೇರ್‌ನ ವಿಧವನ್ನು ‘ಝಿರೋ ಕ್ಲಿಕ್’ಎಂದು ಕರೆಯಲಾಗುತ್ತದೆ. ಅಂದರೆ ಬಳಕೆದಾರರು ದುರುದ್ದೇಶಪೂರಿತ ಲಿಂಕ್‌ನ್ನು ಕ್ಲಿಕ್ ಮಾಡದೇ ಮಾಲ್‌ವೇರ್ ನ ದಾಳಿಗೊಳಗಾಗುತ್ತಾರೆ.

ಝಿರೋ ಕ್ಲಿಕ್ ಮಾಲ್‌ವೇರ್ ಸಾಮಾನ್ಯವಾಗಿ ಬಳಕೆದಾರನ ಸಾಧನದ ಮೇಲೆ ದಾಳಿಯ ಬಳಿಕ ಸ್ವತಃ ಅಳಿಸಿ ಹೋಗುತ್ತದೆ ಮತ್ತು ಸಂಶೋಧಕರು ಮತ್ತು ತಂತ್ರಜ್ಞಾನ ಕಂಪನಿಗಳ ಅಧ್ಯಯನಕ್ಕೆ ಯಾವುದೇ ಕುರುಹನ್ನು ಬಿಡುವುದಿಲ್ಲ. ಆದರೆ ಈ ಬಾರಿ ಅದು ಭಿನ್ನವಾಗಿತ್ತು ಮತ್ತು ನಕಲಿ ಇಮೇಜ್ ಫೈಲ್ ಮೂಲಕ ಕುರುಹನ್ನು ಬಿಟ್ಟಿತ್ತು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top