'ವಿವಾಹೇತರ ಸಂಬಂಧ' ಆರೋಪಿಸಿ ಮಹಿಳೆಗೆ ಮಾರಣಾಂತಿಕ ಹಲ್ಲೆ: ವಿಡಿಯೋ ವೈರಲ್
Photo: Twitter/zoo_bear
ಪಾಟ್ನಾ: ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿ ಗ್ರಾಮಸ್ಥರು ಮಹಿಳೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬಿಹಾರದ ಮಾಧೇಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಲ್ಲೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಾಧೇಪುರ ಜಿಲ್ಲೆಯ ಪೊಲೀಸರು ಹಲ್ಲೆಕೋರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು indianexpress.com ವರದಿ ಮಾಡಿದೆ.
ಜಿಲ್ಲೆಯ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಜಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಮಹಿಳೆ ಪ್ರಜ್ಞೆ ತಪ್ಪುವವರೆಗೂ ಥಳಿಸಿದ್ದಾರೆ ಎಂದು ವರದಿಯಾಗಿದೆ.
''ಬೆಳಿಗ್ಗೆಯಿಂದ ಹೊಟ್ಟೆನೋವು ಕಾಣಿಸಿಕೊಂಡಿತ್ತು. ರಾತ್ರಿ ವೇಳೆ ಮಲವಿಸರ್ಜನೆಗೆಂದು ಸಮೀಪದ ಜೋಳದ ಗದ್ದೆಗೆ ಹೋಗಿದ್ದೆ. ಇದ್ದಕ್ಕಿದ್ದಂತೆ, ನನ್ನ ಕುಟುಂಬದೊಂದಿಗೆ ಮೊದಲೇ ತಕರಾರುಗಳಿದ್ದ ನನ್ನ ನೆರೆಮನೆಯ ಶಂಕರ್ ದಾಸ್ ಹಾಗೂ ಆತನ ಸಹಚರರಾದ ಪಿಂಟು ದಾಸ್, ಪ್ರದೀಪ್ ದಾಸ್, ಅಭಯ್ ದಾಸ್ ಗದ್ದೆಗೆ ಬಂದು ನನ್ನನ್ನು ಆಕ್ರಮಿಸಿದ್ದಾರೆ. ನಾನು ಸಹಾಯಕ್ಕಾಗಿ ಕೂಗಿದೆ. ನನ್ನ ಕುಟುಂಬ ಸದಸ್ಯರು ಸ್ಥಳಕ್ಕೆ ಬರುತ್ತಿದ್ದಂತೆ ಅವರು ಸ್ಥಳದಿಂದ ಓಡಿಹೋಗಿದ್ದಾರೆ” ಎಂದು ಹಲ್ಲೆಗೊಳಾದ ಮಹಿಳೆ ಹೇಳಿರುವುದಾಗಿ 'ನವಭಾರತ್ ಟೈಮ್ಸ್' ವರದಿ ಮಾಡಿದೆ.
ಅಂದು ರಾತ್ರಿಯೇ ಆಕೆಯ ಮೇಲೆ ಹಲ್ಲೆಗೆ ದುಷ್ಕರ್ಮಿಗಳು ಮುಂದಾಗಿದ್ದರು, ಆದರೆ, ಆಕೆಯ ಕುಟುಂಬಸ್ಥರು ಬಂದಿದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಮರುದಿನ ಬೆಳಗ್ಗೆ ಪಂಚಾಯಿತಿ ಕರೆದು ʼವಿವಾಹೇತರ ಸಂಬಂಧದʼ ಆರೋಪ ಹೊರಿಸಿ ಗ್ರಾಮಸ್ಥರ ಸಮ್ಮುಖದಲ್ಲೇ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಥಳಿಸುವ ವೇಳೆ ಮಹಿಳೆಯ ಬಟ್ಟೆಯನ್ನು ಎಳೆದಾಡಿರುವುದು ಕೂಡಾ ವಿಡಿಯೋದಲ್ಲಿ ದಾಖಲಾಗಿದೆ. ಹಲ್ಲೆಗೊಳಗಾದ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಮಹಿಳೆ ಮೇಲಿನ ಆರೋಪವನ್ನು ಆಕೆಯ ಪತಿ ನಿರಾಕರಿಸಿದ್ದಾರೆ. ಆಕೆಯ ಪತಿ ಊರಲ್ಲಿಲ್ಲದ ವೇಳೆ ಈ ಘಟನೆ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಬಂದು ತಲುಪಿದ್ದಾರೆ.
ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ಪ್ರತಿಕ್ರಿಯಿಸಿದ್ದು, ವೈರಲ್ ಆಗಿರುವ ವಿಡಿಯೋ ನಮ್ಮ ಗಮನಕ್ಕೆ ಬಂದಿದೆ. ನಾವು ತಪ್ಪಿತಸ್ಥರನ್ನು ಗುರುತಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.