ಜಗತ್ತಿನ ಆರನೇ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ
ಗೌತಮ್ ಅದಾನಿ (PTI)
ಹೊಸದಿಲ್ಲಿ: ಅದಾನಿ ಗ್ರೂಪ್ ಸ್ಥಾಪಕ ಮತ್ತು ಅಧ್ಯಕ್ಷ ಗೌತಮ್ ಅದಾನಿ ಈಗ ವಿಶ್ವದ ಆರನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅವರು ಒರೇಕಲ್ ಸಂಸ್ಥೆಯ ಲ್ಯಾರಿ ಎಲ್ಲಿಸನ್ ಹಾಗೂ ಗೂಗಲ್ ಸಂಸ್ಥೆಯ ಸರ್ಗೇ ಬ್ರಿನ್ ಮತ್ತು ಲ್ಯಾರಿ ಪೇಜ್ ಅವರನ್ನು ಹಿಂದಿಕ್ಕಿ ಈ ಸ್ಥಾನವನ್ನು ತಲುಪಿದ್ದಾರೆ ಎಂದು businessinsider.in ವರದಿ ಮಾಡಿದೆ.
ಫೋರ್ಬ್ಸ್ ರಿಯಲ್-ಟೈಮ್ ಬಿಲಿಯನೇರ್ಸ್ ಪಟ್ಟಿಯ ಪ್ರಕಾರ ಅದಾನಿ ಮತ್ತು ಅವರ ಕುಟುಂಬದ ನಿವ್ವಳ ಸಂಪತ್ತು 116.3 ಬಿಲಿಯನ್ ಡಾಲರ್ ಆಗಿದೆ. ಕಳೆದ ವಾರವಷ್ಟೇ ಅದಾನಿ ಅವರ ಒಟ್ಟು ಸಂಪತ್ತು 100 ಬಿಲಿಯನ್ ಡಾಲರ್ ಗಡಿ ದಾಟಿತ್ತು.
ಗೌತಮ್ ಅದಾನಿ ಅವರು ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲ ಬಾರಿಯೇನಲ್ಲವಾದರೂ ಆರನೇ ಸ್ಥಾನಕ್ಕೆ ಅವರು ತಲುಪಿದ್ದು ಇದೇ ಮೊದಲ ಬಾರಿ.
ಈಗಾಗಲೇ ರಿಲಯನ್ಸ್ ಸಂಸ್ಥೆಯ ಮುಕೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಗೌತಮ್ ಅದಾನಿ ಅವರು ಭಾರತದ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಅಂಬಾನಿ ತಮ್ಮ 99.5 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಜಗತ್ತಿನ ಹತ್ತನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಎಂದು ಫೋರ್ಬ್ಸ್ ಪಟ್ಟಿ ತಿಳಿಸುತ್ತದೆ.
ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಅವರು ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರೆ, ಅಮೆಝಾನ್ ಸ್ಥಾಪಕ ಜೆಫ್ ಬೆಝೋಸ್ ಎರಡನೇ ಸ್ಥಾನದಲ್ಲಿದ್ದಾರೆ.