ಆಯಿಲ್ ಇಂಡಿಯಾ ಲಿಮಿಟೆಡ್ನ ಕೇಂದ್ರ ಕಚೇರಿಯಲ್ಲಿ ಸೈಬರ್ ದಾಳಿ
ಗುವಾಹತಿ: ಅಸ್ಸಾಂನ ದುಲಿಯಾಜನ್ ಪ್ರದೇಶದಲ್ಲಿರುವ ಆಯಿಲ್ ಇಂಡಿಯಾ ಲಿಮಿಟೆಡ್ನ ತೈಲಕ್ಷೇತ್ರ ಕೇಂದ್ರ ಕಚೇರಿಯ ಕಂಪ್ಯೂಟರ್ ಗಳು ಸೈಬರ್ ದಾಳಿಗೆ ತುತ್ತಾಗಿವೆ ಎಂಬ ಅಂಶ ಸರ್ಕಾರಿ ಸ್ವಾಮ್ಯದ ತೈಲ ಶುದ್ಧೀಕರಣ ಘಟಕ ಪೊಲೀಸರಿಗೆ ನೀಡಿದ ದೂರಿನಿಂದ ಬಹಿರಂಗಪಟ್ಟಿದೆ.
ಈ ವ್ಯವಸ್ಥೆಯನ್ನು ಸರಿಪಡಿಸಲು 75 ಲಕ್ಷ ಡಾಲರ್ ಬಿಟ್ ಕಾಯಿನ್ ರೂಪದಲ್ಲಿ ನೀಡಬೇಕು ಎಂದು ದಾಳಿ ನಡೆಸಿದ ಗುಂಪು ಆಗ್ರಹಿಸಿದೆ ಎಂದೂ ದೂರಿನಲ್ಲಿ ವಿವರಿಸಲಾಗಿದೆ.
ದೇಶದ ಎರಡನೇ ಅತಿದೊಡ್ಡ ತೈಲ ಮತ್ತು ಅನಿಲ ಕಂಪನಿಯಾದ ಓಐಎಲ್ ದುಲಿಯಾಜನ್ನಲ್ಲಿ ಕೇಂದ್ರ ಕಚೇರಿ ಹೊಂದಿದೆ. ದಾಳಿಯಿಂದ ಎಷ್ಟರಮಟ್ಟಿಗೆ ಕಂಪ್ಯೂಟರ್ ವ್ಯವಸ್ಥೆ ಮೇಲೆ ಹಾನಿಯಾಗಿದೆ ಎನ್ನುವುದು ತಕ್ಷಣಕ್ಕೆ ತಿಳಿದು ಬಂದಿಲ್ಲ. ಆದರೆ ಉತ್ಪಾದನೆ ಮತ್ತು ಕೊರೆಯುವಿಕೆಗೆ ಸಂಬಂಧಿಸಿದ ಕಂಪ್ಯೂಟರ್ ವ್ಯವಸ್ಥೆಗೆ ಯಾವುದೇ ಹಾನಿ ಆಗಿಲ್ಲ ಎಂದು ಪ್ರತಿನಿಧಿಯೊಬ್ಬರು ಹೇಳಿದ್ದಾರೆ.
"ಓಐಎಲ್ ಕಂಪ್ಯೂಟರ್ ವ್ಯವಸ್ಥೆ ಮೇಲೆ ನಡೆದ ಸೈಬರ್ ದಾಳಿಯಲ್ಲಿ ಕೆಲ ಸಿಸ್ಟಂಗಳು ಹಾಗೂ ಕೆಲ ಸರ್ವರ್ ಗಳಿಗೆ ಹಾನಿಯಾಗಿದೆ, ಮುಂಜಾಗ್ರತಾ ಕ್ರಮವಾಗಿ, ನಮ್ಮ ಕೆಲ ಸಿಸ್ಟಂಗಳನ್ನು ನಾವು ಸ್ಥಗಿತಗೊಳಿಸಿದ್ದು, ಅವುಗಳ ಪುನಶ್ಚೇತನ ಕಾರ್ಯ ಆರಂಭವಾಗಿದೆ" ಎಂದು ಓಐಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ತ್ರಿವಿದ್ ಹಜಾರಿಕಾ ಹೇಳಿದ್ದಾರೆ. ವ್ಯವಸ್ಥೆ ಸರಿಪಡಿಸಲು ಸೈಬರ್ ಭದ್ರತಾ ತಜ್ಞರನ್ನು ಕರೆ ತರಲಾಗಿದೆ ಎಂದು ವಿವರಿಸಿದ್ದಾರೆ.
ಕೆಲ ಉದ್ಯೋಗಿಗಳು ಕಾರ್ಯನಿರ್ವಹಿಸುವ ವೇಳೆ ಕಂಪ್ಯೂಟರ್ ಔಟೇಜ್ ಸಮಸ್ಯೆ ತಲೆದೋರಿದಾಗ ಸೈಬರ್ ದಾಳಿ ಗಮನಕ್ಕೆ ಬಂದಿದೆ. ಐಟಿ ಬೆಂಬಲ ತಂಡ ಈ ಸಮಸ್ಯೆಗೆ ಮಾಲ್ ವೇರ್ ದಾಳಿ ಕಾರಣ ಎಂದು ಪತ್ತೆ ಮಾಡಿದ್ದು, ಹಾನಿಗೀಡಾಗಿರುವ ಕಂಪ್ಯೂಟರ್ ಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.