ಸಾಗರೋತ್ತರ ಭಾರತೀಯರ 26 ಸಂಘಟನೆಗಳಿಂದ ಝುಬೈರ್, ಸೆಟಲ್ವಾಡ್ ಬಂಧನಗಳ ಖಂಡನೆ
ಹೊಸದಿಲ್ಲಿ,ಜೂ.29: ವಿದೇಶಗಳಲ್ಲಿರುವ ಭಾರತೀಯ ವಲಸಿಗ ಸಮುದಾಯದ ಹಲವಾರು ಸಾಮಾಜಿಕ ಸಂಘಟನೆಗಳು ಮಂಗಳವಾರ ಜಂಟಿ ಹೇಳಿಕೆಯೊಂದನ್ನು ಹೊರಡಿಸಿ ಮಾನವ ಹಕ್ಕುಗಳ ಹೋರಾಟಗಾರರಾದ ತೀಸ್ತಾ ಸೆಟಲ್ವಾಡ್ ಮತ್ತು ಆರ್.ಬಿ.ಶ್ರೀಕುಮಾರ ಹಾಗೂ ಆಲ್ಟ್ನ್ಯೂಸ್ನ ಸಹಸಂಸ್ಥಾಪಕ ಮತ್ತು ಪತ್ರಕರ್ತ ಮುಹಮ್ಮದ್ ಝುಬೈರ್ ಅವರ ಬಂಧನಗಳನ್ನು ಖಂಡಿಸಿವೆ.
ಇಂಡಿಯನ್ ಅಮೇರಿಕನ್ ಮುಸ್ಲಿಮ್ ಕೌನ್ಸಿಲ್ನ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿರುವ ಹೇಳಿಕೆಗೆ ಭಾರತದ ಹೊರಗಿನ ಇತರ 25 ಸಾಮಾಜಿಕ ಸಂಘಟನೆಗಳೂ ಅಂಕಿತಗಳನ್ನು ಹಾಕಿವೆ.
2002ರಲ್ಲಿ ಗುಜರಾತಿನಲ್ಲಿ ನಡೆದಿದ್ದ ಮುಸ್ಲಿಮರ ಹತ್ಯಾಕಾಂಡದ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಸೆಟ್ಲವಾಡ್ ಮತ್ತು ಶ್ರೀಕುಮಾರ ಪ್ರಮುಖ ಪಾತ್ರ ವಹಿಸಿದ್ದರು ಎಂದಿರುವ ಹೇಳಿಕೆಯು, ಗುಜರಾತಿನ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಝಕಿಯಾ ಜಾಫ್ರಿ ದಾಖಲಿಸಿದ್ದ ಪ್ರಕರಣದ ಮುಂದುವರಿಕೆಯಲ್ಲಿ ನೆರವಾಗುವಲ್ಲಿ ಸೆಟ್ಲ್ವಾಡ್ ಅವರ ಎನ್ಜಿಒ ವಹಿಸಿದ್ದ ಪಾತ್ರವನ್ನು ಉಲ್ಲೇಖಿಸಿದೆ.
ಸೆಟ್ಲವಾಡ್ ಅವರ ಬಂಧನಕ್ಕೆ ಕಾರಣವಾದ ಘಟನಾವಳಿಗಳನ್ನು ಪ್ರಮುಖವಾಗಿ ಬಿಂಬಿಸಿರುವ ಹೇಳಿಕೆಯು,ಸೆಟ್ಲವಾಡ್ ಬಂಧನವು ನಿಸ್ಸಂದಿಗ್ಧವಾಗಿ ಅವರ ಕೆಲಸಗಳಿಂದ ಹೆಚ್ಚಿನ ನಷ್ಟವನ್ನು ಅನುಭವಿಸಿದ್ದ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರಿಂದ ರಾಜಕೀಯ ಪ್ರೇರಿತವಾಗಿದೆ ಎಂದು ತಿಳಿಸಿದೆ.
ಸರ್ವೋಚ್ಚ ನ್ಯಾಯಾಲಯವನ್ನು ಟೀಕಿಸಿರುವ ಹೇಳಿಕೆಯು, ಅನಾವರಣಗೊಂಡಿರುವ ಬೆಳವಣಿಗೆಗಳು ಭಾರತದ ಅತ್ಯುನ್ನತ ನ್ಯಾಯಾಲಯಕ್ಕೆ ಸ್ವಾತಂತ್ರದ ಕೊರತೆಯಿದೆ ಎನ್ನುವುದನ್ನು ಬಹಿರಂಗಪಡಿಸಿವೆ. ಇದೊಂದು ಅಪಾಯಕಾರಿ ಪೂರ್ವ ನಿದರ್ಶನವಾಗಿದ್ದು,ಸರಕಾರದ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ದೂರು ಸಲ್ಲಿಸುವವರನ್ನು ಎದೆಗುಂದಿಸುತ್ತದೆ ಎಂದು ತಿಳಿಸಿದೆ.
ಸೆಟ್ಲವಾಡ್ ಮತ್ತು ಶ್ರೀಕುಮಾರ ಬಂಧನಕ್ಕಾಗಿ ಈಗಾಗಲೇ ದೇಶದೊಳಗೆ ಮತ್ತು ಹೊರಗೆ ಗುಜರಾತ ಪೊಲೀಸರು,ಸರಕಾರ ಮತ್ತು ಸರ್ವೋಚ್ಚ ನ್ಯಾಯಾಲಯಗಳ ವಿರುದ್ಧ ವ್ಯಾಪಕ ಖಂಡನೆಗಳು ವ್ಯಕ್ತವಾಗಿವೆ.
ಝುಬೈರ್ ಬಂಧನವು ಪತ್ರಿಕಾ ಸ್ವಾತಂತ್ರದ ಮತ್ತು ನಿಜಕ್ಕೂ ಸತ್ಯದ ಕುರಿತು ನಾಗರಿಕರ ಹಕ್ಕುಗಳ ಮೇಲಿನ ದಾಳಿಯಾಗಿದೆ ಎಂದು ತಿಳಿಸಿರುವ ಹೇಳಿಕೆಯು,ಭಾರತವು ಫ್ಯಾಸಿಸಮ್ನತ್ತ ಸಾಗುತ್ತಿರುವದರ ವಿರುದ್ಧ ಅಮೆರಿಕವು ಸಕ್ರಿಯವಾಗಿ ಮತ್ತು ಸಾರ್ವಜನಿಕವಾಗಿ ಹೋರಾಡಬೇಕಿದೆ ಎನ್ನುವುದನ್ನು ಈ ಬಂಧನಗಳು ನೆನಪಿಸುತ್ತಿವೆ ಎಂದಿದೆ. ಭಿನ್ನಾಭಿಪ್ರಾಯದ ಧ್ವನಿಗಳನ್ನಡಗಿಸಲು ಕೇಂದ್ರ ಸರಕಾರವು ಬಂಧಿಸಿರುವ ಆನಂದ ತೇಲ್ತುಂಬ್ಡೆ,ಜಾವೇದ್ ಮುಹಮ್ಮದ್,ಪರ್ವೀನ್ ಫಾತಿಮಾ ಮತ್ತು ಉಮರ್ ಖಾಲಿದ್ರಂತಹ ಇತರ ಹಲವಾರು ಸಾಮಾಜಿಕ ಹೋರಾಟಗಾರರನ್ನು ಹೇಳಿಕೆಯು ಉಲ್ಲೇಖಿಸಿದೆ.
ಅಮೆರಿಕದ ಇಂಡಿಯನ್ ಅಮೆರಿಕನ್ ಮುಸ್ಲಿಮ್ ಕೌನ್ಸಿಲ್,ಇಂಡಿಯಾ ಸಿವಿಲ್ ವಾಚ್ ಇಂಟರ್ನ್ಯಾಷನಲ್,ಹಿಂದುಸ್ ಫಾರ್ ಹ್ಯೂಮನ್ ರೈಟ್ಸ್ ಮತ್ತು ದಲಿತ ಸಾಲಿಡಾರಿಟಿ ಫೋರಂ,ನ್ಯೂಝಿಲಂಡ್ನ ಆವಟೇರಿಯಾ ಅಲೈನ್ಸ್ ಆಫ್ ಪ್ರೊಗ್ರೆಸಿವ್ ಇಂಡಿಯನ್ಸ್,ಕೆನಡಾದ ಸೆರಾಸ್,ಆಸ್ಟ್ರೇಲಿಯಾದ ಸಿಎಆರ್ಇ,ಜರ್ಮನಿಯ ಇಂಡಿಯಾ ಜಸ್ಟೀಸ್ ಪ್ರಾಜೆಕ್ಟ್,ಫಿನ್ಲಂಡ್ನ ಇಂಡಿಯನ್ ಸಾಲಿಡಾರಿಟಿ ಫಿನ್ಲಂಡ್,ಬ್ರಿಟನ್ನ ಸ್ಕಾಟಿಷ್ ಇಂಡಿಯನ್ಸ್ ಫಾರ್ ಜಸ್ಟೀಸ್,ದ.ಆಫ್ರಿಕಾದ ಪೀಪಲ್ ಅಗೇಯ್ನಸ್ಟ್ ಅಪಾರ್ಥೈಡ್ ಆ್ಯಂಡ್ ಫ್ಯಾಸಿಸಂ ಇವು ಹೇಳಿಕೆಗೆ ಸಹಿ ಮಾಡಿರುವ ಸಂಘಟನೆಗಳಲ್ಲಿ ಸೇರಿವೆ.