ಕರ್ನಾಟಕದ ಸಿನಿ ಶೆಟ್ಟಿಗೆ ಮಿಸ್ ಇಂಡಿಯಾ ವರ್ಲ್ಡ್ ಕಿರೀಟ
ಮುಂಬೈ, ಜು. 4: ಕರ್ನಾಟಕದ ಸಿನಿ ಶೆಟ್ಟಿ ಮಿಸ್ ಇಂಡಿಯಾ ವರ್ಲ್ಡ್ ಕಿರೀಟ ಧರಿಸಿದ್ದಾರೆ. ಮುಂಬೈಯ ಜಿಯೊ ವರ್ಲ್ಡ್ ಕನ್ವೆನ್ಶನ್ ಕೇಂದ್ರದಲ್ಲಿ ರವಿವಾರ ನಡೆದ ವಿಎಲ್ಸಿಸಿ ಫೆಮಿನಾ ಮಿಸ್ ಇಂಡಿಯಾದ ಗ್ರ್ಯಾಂಡ್ ಫಿನಾಲೆಯಲ್ಲಿ ಸಿನಿ ಶೆಟ್ಟಿ ಅವರು ‘‘ಫೆಮಿನಾ ಮಿಸ್ ಇಂಡಿಯಾ ವಲ್ಡ್-2022’’ ಆಗಿ ಹೊರ ಹೊಮ್ಮಿದ್ದಾರೆ.
ರಾಜಸ್ಥಾನದ ರುಬಾಲ್ ಶೇಖಾವತ್ ಅವರು ಫೆಮಿನಾ ಮಿಸ್ ಇಂಡಿಯ-2022ರ ಮೊದಲ ರನ್ನರ್ ಅಫ್ ಹಾಗೂ ಉತ್ತರಪ್ರದೇಶದ ಶಿನಾಟಾ ಚೌಹಾನ್ ಫೆಮಿನಾ ಮಿಸ್ ಇಂಡಿಯ-2022ರ ಸೆಕೆಂಡ್ ರನ್ನರ್ ಅಪ್ ಆಗಿ ಹೊರ ಹೊಮ್ಮಿದರು.
ಬಾಲಿವುಡ್ ತಾರೆಯರಾದ ನೇಹಾ ದುಪಿಯಾ, ಡಿನೋ ಮೊರಿಯಾ ಹಾಗೂ ಮಲ್ಲಿಕಾ ಅರೋರಾ ವಿನ್ಯಾಸಕಾರರಾದ ರೋಹಿತ್ ಗಾಂಧಿ ಹಾಗೂ ರಾಹುಲ್ ಖನ್ನ, ಕೊರಿಯೊಗ್ರಾಫರ್ ಶಿಯಾಮಕ್ ದಾವರ್ ಹಾಗೂ ಮಾಜಿ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ತೀರ್ಪುಗಾರರಾಗಿ ಭಾಗವಹಿಸಿದ್ದರು.
21ರ ಹರೆಯದ ಸಿನಿ ಶೆಟ್ಟಿ ಅವರು ಕರ್ನಾಟಕದ ಉಡುಪಿ ಮೂಲದವರು. ಇವರ ತಂದೆ ಸದಾನಂದ ಶೆಟ್ಟಿ ಹಾಗೂ ತಾಯಿ ಹೇಮಾ ಶೆಟ್ಟಿ. ಮುಂಬೈಯಲ್ಲಿ ಶಿಕ್ಷಣ ಪಡೆದ ಇವರು, ಅಲ್ಲಿಯೇ ತಮ್ಮ ವೃತ್ತಿ ಜೀವನ ಆರಂಭಿಸಿದರು. ಚಿಕ್ಕಂದಿನಿಂದಲೇ ಭರತನಾಟ್ಯ ಕಲಿಯಲು ಆರಂಭಿಸಿದ ಸಿನಿ ಶೆಟ್ಟಿ ತನ್ನ 14 ವಯಸ್ಸಿನಲ್ಲಿ ಮೊದಲ ಭರತ ನಾಟ್ಯ ಪ್ರದರ್ಶನ ನೀಡಿದ್ದರು.
ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಿನಿ ಶೆಟ್ಟಿ ಅವರು ಹಲವು ಜಾಹೀರಾತುಗಳಲ್ಲಿ ನಟಿಸಿದ್ದಾರೆ.