ಎರಡನೇ ಮದುವೆಗೆ ಸಜ್ಜಾದ ಪಂಜಾಬ್ ಸಿಎಂ ಭಗವಂತ್ ಮಾನ್!
ಭಗವಂತ್ ಮಾನ್ (PTI)
ಛಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ನಾಳೆ ವಿವಾಹವಾಗಲಿದ್ದಾರೆ. ಚಂಡೀಗಢದ ಅವರ ಮನೆಯಲ್ಲಿ ಮದುವೆಯ ಸಣ್ಣ ಸಮಾರಂಭ ಏರ್ಪಡಿಸಲಾಗಿದೆ ಎಂದು ndtv ವರದಿ ಮಾಡಿದೆ.
ಮಾನ್ ಅವರು ಗುರುಪ್ರೀತ್ ಕೌರ್ ಅವರನ್ನು ಮದುವೆಯಾಗಲಿದ್ದಾರೆ.
ಮದುವೆಯಲ್ಲಿ ಕುಟುಂಬದವರು ಮತ್ತು ಹತ್ತಿರದ ಸಂಬಂಧಿಕರು ಮಾತ್ರ ಇರುತ್ತಾರೆ. ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ, ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.
"ನಾಳೆ ಇಲ್ಲಿ ಖಾಸಗಿ ಸಮಾರಂಭದಲ್ಲಿ ಮಾನ್ ಸಾಹಬ್ ವಿವಾಹವಾಗಲಿದ್ದಾರೆ. ಅವರು ಡಾ. ಗುರುಪ್ರೀತ್ ಕೌರ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ" ಎಂದು ಎಎಪಿ ಹಿರಿಯ ನಾಯಕ ಮತ್ತು ವಕ್ತಾರ ಮಲ್ವಿಂದರ್ ಸಿಂಗ್ ಕಾಂಗ್ ಪಿಟಿಐಗೆ ತಿಳಿಸಿದ್ದಾರೆ.
ಮಾಜಿ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಆಗಿರುವ ಮಾನ್ ಅವರು ಆರು ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದರು. ಅವರ ಇಬ್ಬರು ಮಕ್ಕಳು ತಮ್ಮ ತಾಯಿಯೊಂದಿಗೆ ಅಮೆರಿಕಾದಲ್ಲಿ ವಾಸಿಸುತ್ತಿದ್ದಾರೆ. ಅವರು ಮಾರ್ಚ್ 16 ರಂದು ಮಾನ್ ಅವರ ಪ್ರಮಾಣವಚನ ಸಮಾರಂಭಕ್ಕೆ ಬಂದಿದ್ದರು.