3 ತಿಂಗಳ ಹಿಂದೆ ಪೊಲೀಸರಿಗೆ ಶರಣಾಗಿದ್ದ ಮಾಜಿ ಮಾವೋವಾದಿಯ ಕೊಲೆ
ಬಿಜಾಪುರ, ಆ.21: ಮೂರು ತಿಂಗಳುಗಳ ಹಿಂದೆ ಪೊಲೀಸರಿಗೆ ಶರಣಾಗಿದ್ದ ತಮ್ಮ ಮಾಜಿ ಸಹಚರನೊಬ್ಬನನು ಶಂಕಿತ ಮಾವೋವಾದಿಗಳು ರವಿವಾರ ಹತ್ಯೆಗೈದಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ರವಿವಾರ ತಿಳಿಸಿದ್ದಾರೆ. 40 ವರ್ಷ ವಯಸ್ಸಿನ ಬಾಮಾನ್ ಪೊಯಾಮ್ನ ಮೃತದೇಹವು ಭೈರಾಮ್ಘರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪೊಂಡುಮ್ ಗ್ರಾಮದ ಸಮೀಪದ ರಸ್ತೆಯೊಂದರಲ್ಲಿ ಪತ್ತೆಯಾಗಿರುವುದಾಗಿ ಅವರು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಕೆಲವು ದಿನಗಳ ಹಿಂದೆ ಪೊಯಾಮ್ ನಾಪತ್ತೆಯಾಗಿದ್ದನು. ಆತನನ್ನು ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಯಾಮ್ನ ಮೃತದೇಹದ ಮೇಲೆ ಹರಿತವಾದ ಆಯುಧಗಳಿಂದಾದ ಗಾಯಗಳು ಕಂಡುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಇದೊಂದು ನಕ್ಸಲರ ಕೃತ್ಯವೆಂಬಂತೆ ಕಂಡುಬರುತ್ತಿದ್ದು, ಮುಂದಿನ ತನಿಖೆ ನಡೆಯುತ್ತಿದೆ’’ ಎಂದವರು ಹೇಳಿದ್ದಾರೆ.
Next Story