ಟ್ವೆಂಟಿ-20 ಕ್ರಿಕೆಟ್: ವಿರಾಟ್ ಕೊಹ್ಲಿ ವಿಶ್ವ ದಾಖಲೆ ಸರಿಗಟ್ಟಿದ ಬಾಬರ್ ಆಝಂ
Photo:PTI
ಕರಾಚಿ, ಅ.1:ಟ್ವೆಂಟಿ-20 ಕ್ರಿಕೆಟ್ ನಲ್ಲಿ ವೇಗವಾಗಿ 3,000 ರನ್ ಪೂರೈಸಿದ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಆಝಂ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಇಂಗ್ಲೆಂಡ್ ವಿರುದ್ಧ ಟ್ವೆಂಟಿ-20 ಸರಣಿಯಲ್ಲಿ ಶುಕ್ರವಾರ ನಡೆದ 6ನೇ ಪಂದ್ಯದಲ್ಲಿ ಆಝಂ ಈ ಸಾಧನೆ ಮಾಡಿದರು. 27ರ ಹರೆಯದ ಆಝಂ ಆರನೇ ಟ್ವೆಂಟಿ-20 ಪಂದ್ಯದಲ್ಲಿ ಔಟಾಗದೆ 87 ರನ್(59 ಎಸೆತ, 7 ಬೌಂಡರಿ, 3 ಸಿಕ್ಸರ್)ಗಳಿಸಿದರು. ಆಝಂ ತನ್ನ 81ನೇ ಇನಿಂಗ್ಸ್ ನಲ್ಲಿ 3,000 ರನ್ ಪೂರೈಸಿದರು. ವಿಶೇಷವೆಂದರೆ ಕೊಹ್ಲಿ ಕೂಡ 3 ಸಾವಿರ ರನ್ ಪೂರೈಸಲು 81 ಇನಿಂಗ್ಸ್ ಗಳಲ್ಲಿ ಆಡಿದ್ದರು.
ಏಷ್ಯಾ ಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಆಝಂ ವೇಗವಾಗಿ 3 ಸಾವಿರ ರನ್ ಪೂರೈಸುವ ಪ್ರಕ್ರಿಯೆಯಲ್ಲಿ ಐರ್ಲೆಂಡ್ನ ಪಾಲ್ ಸ್ಟಿರ್ಲಿಂಗ್ರನ್ನು ಹಿಂದಿಕ್ಕಿದರು. ರೋಹಿತ್ ಶರ್ಮಾ, ಕೊಹ್ಲಿ ಹಾಗೂ ನ್ಯೂಝಿಲ್ಯಾಂಡ್ ನ ಮಾರ್ಟಿನ್ ಗಪ್ಟಿಲ್ ಬಳಿಕ ಟಿ-20 ಮಾದರಿಯಲ್ಲಿ ಹೆಚ್ಚು ರನ್ ಗಳಿಸಿದ ವಿಶ್ವದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ.
ಲಾಹೋರ್ನ ಗಡಾಫಿ ಸ್ಟೇಡಿಯಂನಲ್ಲಿ ಶುಕ್ರವಾರ ಬಾಬರ್ ಆಝಂ ನೆರವಿನಿಂದ ಪಾಕಿಸ್ತಾನ 6 ವಿಕೆಟಿಗೆ 169 ರನ್ ಗಳಿಸಿತು. ಇಂಗ್ಲೆಂಡ್ 14.3 ಓವರ್ ಗಳಲ್ಲಿ ರನ್ ಚೇಸಿಂಗ್ ಮಾಡಿ ಗೆಲುವಿನ ನಗೆ ಬೀರಿದೆ. ಸರಣಿಯನ್ನು 3-3ರಿಂದ ಸಮಬಲಗೊಳಿಸಿದೆ.
ಉಭಯ ತಂಡಗಳು ರವಿವಾರ ಲಾಹೋರ್ನಲ್ಲಿ ನಿರ್ಣಾಯಕ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
T20I runs for @babarazam258
— Pakistan Cricket (@TheRealPCB) September 30, 2022
He is the joint fastest to the milestone in 81 innings and only the fifth batter to cross the landmark figure #PAKvENG | #UKSePK pic.twitter.com/ZY4TnYKJIp