-

ಕೇರಳ ಕರಾವಳಿಯನ್ನು ಕಂಗೆಡಿಸುತ್ತಿರುವ ವಿಜಿಂಗಂ ಬಂದರು ಯೋಜನೆ

-

ಯೋಜನೆಯೊಂದು ಸರಕಾರದ ಬೆಂಬಲದೊಂದಿಗೆ ಕಾರ್ಯಗತಗೊಳ್ಳುವಾಗಿನ ಎಲ್ಲ ಆತಂಕಗಳೂ ವಿಜಿಂಗಂ ಯೋಜನೆಯ ನಿರ್ಮಾಣ ಕಾರ್ಯ ನಡೆದಿರುವ ಕೇರಳದ ನೆಲದಲ್ಲಿ ಕಾಣಿಸಿಕೊಂಡಿವೆ. ರಾಜಕೀಯದ ಎದುರು, ಅದರ ಹಿತಾಸಕ್ತಿಗಳ ಎದುರು ಜನರ ಬದುಕು, ಪರಿಸರ, ನೆಲದ ನಾಳೆಗಳು ಇವಾವುವೂ ಮುಖ್ಯವಾಗದೆ ಕಡೆಗಣನೆಗೆ ಒಳಗಾಗುವುದು, ಎಲ್ಲ ಜನವಿರೋಧಿ ಸತ್ಯಗಳನ್ನು ಮರೆಮಾಚುವುದು ನಡೆಯುತ್ತದೆ ಎಂಬ ಆತಂಕವನ್ನೇ ಈಗ ವಿಜಿಂಗಂ ಯೋಜನೆ ವಿರೋಧಿ ಹೋರಾಟಗಾರರೂ ವ್ಯಕ್ತಪಡಿಸುತ್ತಿರುವುದು. ನಿಜವಾಗಿಯೂ ಈ ಯೋಜನೆಯಿಂದ ಬಾಧಿತವಾಗುವ ಸಮುದಾಯಗಳ ನಾಳೆಗಳೆಂಥವು ಎಂಬ ಬಗ್ಗೆ ಅವರೆದುರಿಗೂ ಇರುವುದು ಪ್ರಶ್ನೆಗಳು ಮಾತ್ರ.

ಕೇರಳದ ವಿಜಿಂಗಂನಲ್ಲಿ ಅದಾನಿ ಅಂತರ್‌ರಾಷ್ಟ್ರೀಯ ಬಂದರು ನಿರ್ಮಾಣದ ವಿರುದ್ಧ ಮೀನುಗಾರರ ನೇತೃತ್ವದ ಜನಾಂದೋಲನ ತೀವ್ರಗೊಳ್ಳುತ್ತಲೇ ಇದೆ. ದೇಶಾದ್ಯಂತದ ಅನೇಕ ಸಂಘಟನೆಗಳನ್ನು ಪ್ರತಿನಿಧಿಸುವ ೪೦೦ಕ್ಕೂ ಹೆಚ್ಚು ಪ್ರಮುಖ ಕಾರ್ಯಕರ್ತರು ಮತ್ತು ಶಿಕ್ಷಣ ತಜ್ಞರು ಈ ಯೋಜನೆ ವಿರುದ್ಧದ ಮಹತ್ವದ ಹೇಳಿಕೆಯನ್ನು ಅನುಮೋದಿಸಿದ್ದಾರೆ ಮತ್ತು ಕಾರ್ಯಕರ್ತರ ದುರುದ್ದೇಶಪೂರಿತ ನಿಂದನೆಯನ್ನು ಖಂಡಿಸಿದ್ದಾರೆ. ಬಂದರು ಯೋಜನೆಯ ಸಾಮಾಜಿಕ-ಪರಿಸರ ಮತ್ತು ಆರ್ಥಿಕ ಪರಿಣಾಮಗಳನ್ನು ಗಂಭೀರವಾಗಿ ಪ್ರಶ್ನಿಸಲಾಗುತ್ತಿದೆ.

ಶತಕೋಟಿಗಳ ಲೆಕ್ಕದಲ್ಲಿ ಅದಾನಿಗೆ ಲಾಭ ತಂದುಕೊಡಲಿರುವ ಈ ಯೋಜನೆ, ೬೦ ವರ್ಷಗಳ ಕಾಲ ಅದಾನಿ ಒಡೆತನದಲ್ಲಿರುವ ಈ ಬಂದರು ಇಲ್ಲಿನ ಮೀನುಗಾರ ಸಮುದಾಯಗಳ ಬದುಕಿನ ಮೇಲೆ ಬರೆಯೆಳೆಯುತ್ತಲೇ ಬೆಳೆಯಲಿದೆ ಎಂಬ ದೊಡ್ಡ ದಿಗಿಲೊಂದು ಎಲ್ಲರನ್ನೂ ಆವರಿಸಿದೆ. ತಮ್ಮ ನೋವಿಗೆ ಸರಕಾರವೇ ಸ್ಪಂದಿಸದ, ಬದಲಾಗಿ ಸರಕಾರವೇ ತಮ್ಮನ್ನು ಅವಹೇಳನ ಮಾಡುತ್ತಿರುವ ಸಂದರ್ಭದ ಬಗೆಗೂ ಅವರಿಗೆ ನೋವಿದೆ. ಸರಕಾರದ ಭದ್ರತೆಯಲ್ಲಿ ನಡೆಯುತ್ತಿರುವ ಬಂದರು ನಿರ್ಮಾಣ ಕಾರ್ಯ, ತಮ್ಮ ಬದುಕನ್ನೇ ತಿಂದುಹಾಕಲಿರುವ ಅಟ್ಟಹಾಸದಂತೆ ಇಲ್ಲಿನ ಸಮುದಾಯಗಳಿಗೆ ಕಾಣಿಸತೊಡಗಿದೆ.

ಕೇರಳದ ರಾಜಧಾನಿ ತಿರುವನಂತಪುರ ಮತ್ತು ಸುತ್ತಮುತ್ತಲಿನ ಕರಾವಳಿ ಮೀನುಗಾರ ಸಮುದಾಯವು ವಿಜಿಂಗಂ ಯೋಜನೆ ವಿರುದ್ಧ ಹೋರಾಟದಲ್ಲಿ ತೊಡಗಿದೆ. ಬಂದರಿನಿಂದಾಗಿ ಕರಾವಳಿ ತೀರದ ಸವಕಳಿ ಉಂಟಾಗಿ ಮೀನುಗಾರಿಕಾ ಗ್ರಾಮಗಳ ಮನೆಗಳು ನಾಶವಾಗುತ್ತಿವೆ ಎಂಬುದು ಪ್ರತಿಭಟನಾಕಾರರ ಅಹವಾಲು. ಬಂದರಿನಲ್ಲಿ ಹೂಳೆತ್ತುವುದರಿಂದ ಸ್ಥಳೀಯ ಮೀನುಗಾರಿಕೆ ಆವಾಸಸ್ಥಾನಗಳ ನಷ್ಟವು ಸಾವಿರಾರು ಮೀನುಗಾರ ಕುಟುಂಬಗಳ ಜೀವನಾಧಾರವನ್ನು ನಾಶಪಡಿಸುತ್ತದೆ ಮತ್ತು ಕರಾವಳಿಯಿಂದ ಅವರ ಸ್ಥಳಾಂತರಕ್ಕೆ ಕಾರಣವಾಗಲಿದೆ ಎಂಬುದು ಅವರ ಆತಂಕ.

ಕೊಚ್ಚಿಯಲ್ಲಿನ ವಲ್ಲಾರ್ ಪಾಡಂಕಂಟೈನರ್ ಟ್ರಾನ್ಸ್ಶಿಪ್‌ಮೆಂಟ್ ಟರ್ಮಿನಲ್ ಪರಿಣಾಮವಾಗಿ ಏನೆಲ್ಲಾ ಆಗಿದೆ ಕಳೆದೊಂದು ದಶಕದಲ್ಲಿ ಎಂಬುದನ್ನು ನೆನಪಿಸುತ್ತಲೇ, ಅದೇ ಸಮುದ್ರ ಕೊರೆತ, ಜಲಚರಗಳ ನಾಶ, ಜನರ ಬದುಕನ್ನು ತಿಂದುಹಾಕುವಂಥ ಬೆಳವಣಿಗೆಗಳು, ಪರಿಸರ ಹಾನಿ ಇವೆಲ್ಲವೂ ಈಗ ಈ ಬಂದರು ಯೋಜನೆಯಿಂದಲೂ ಆಗಲಿವೆ ಎಂಬುದನ್ನು ಮನಗಾಣಿಸುವ ಪ್ರಯತ್ನದಲ್ಲಿ ಹೋರಾಟವು ತೊಡಗಿದೆ.

೫೦ ಸಾವಿರದಷ್ಟು ಮೀನುಗಾರರ ಬದುಕನ್ನು ಈ ಯೋಜನೆ ಅಲ್ಲೋಲಕಲ್ಲೋಲ ಮಾಡಲಿದೆ ಮಾತ್ರವಲ್ಲ, ನೂರಾರು ಬಗೆಯ ಜಲಚರಗಳನ್ನು ಇದು ಬಾಧಿಸಲಿದೆ ಎಂಬುದು ಹೋರಾಟಗಾರರ ಕಳವಳ. ಈ ಯೋಜನೆಯ ಸಂತ್ರಸ್ತರಿಗೆ ಪುನರ್ವಸತಿಯಾಗಲೀ ಪರಿಹಾರವಾಗಲೀ ದೊರೆಯದೇ ಇರುವ ಸಾಧ್ಯತೆಯೇ ಹೆಚ್ಚು ಎಂಬುದು ಕೂಡ ಈಗ ವ್ಯಕ್ತವಾಗುತ್ತಿರುವ ಅನುಮಾನ.

ಬಂದರು ನಿರ್ಮಾಣದಿಂದ ಆಗುವ ಹಾನಿ ಮತ್ತು ಜನರ ಜೀವನದ ಮೇಲಿನ ಪರಿಣಾಮಗಳ ಬಗ್ಗೆ ಕಿಂಚಿತ್ತೂ ಯೋಚಿಸದ ಸರಕಾರ, ಬಂದರು ನಿರ್ಮಾಣದ ಜೊತೆಜೊತೆಯಲ್ಲೇ ಅದಾನಿ ಸಾಮ್ರಾಜ್ಯವು ಇಲ್ಲಿ ಬೇರೂರುವುದಕ್ಕೆ ಎಲ್ಲವನ್ನೂ ಕೊಡುತ್ತಿದೆ ಎಂಬ ಆರೋಪವನ್ನೂ ಮಾಡುತ್ತಿದ್ದಾರೆ ಸ್ಥಳೀಯರು. ಯೋಜನೆ ಸುತ್ತಲಿನ ಪ್ರದೇಶಗಳಲ್ಲಿ ಜಮೀನು ಖರೀದಿಸುತ್ತ ವ್ಯಾಪಿಸಿಕೊಳ್ಳುತ್ತಿರುವ ಅದಾನಿ ಗ್ರೂಪ್, ಎಲ್ಲ ವಾಣಿಜ್ಯ ಸಂಬಂಧಿ ಚಟುವಟಿಕೆಗಳಿಗೆ ಪೂರಕವಾದ ವ್ಯವಸ್ಥೆಯನ್ನು ಮಾಡಿಕೊಳ್ಳುವಲ್ಲಿ ತೊಡಗಿದೆ. ಇಡೀ ಪ್ರದೇಶವೇ ಅವರ ಕೈಗೆ ಹೋಗುತ್ತಿರುವಲ್ಲಿ ತಮ್ಮ ನೋವು ಅರಣ್ಯರೋದನದಂತಾಗುತ್ತಿದೆ ಎಂಬ ಅಸಹಾಯಕತೆಯೂ ವ್ಯಕ್ತವಾಗುತ್ತಿದೆ.

ಈಗಾಗಲೇ ಯೋಜನೆಗಾಗಿ ವಶಪಡಿಸಿಕೊಳ್ಳಲಾದ ಭೂಮಿಯಲ್ಲಿ ಮೂರನೇ ಒಂದು ಪಾಲು ಭೂಮಿ ವಾಣಿಜ್ಯೋದ್ದೇಶಕ್ಕೆ ಬಳಕೆಯಾಗುತ್ತಿದೆ. ಇದಲ್ಲದೆ, ಯೋಜನೆಗೆ ಬೇಕಾದ ಹಣದಲ್ಲಿ ಶೇ.೬೦ರಷ್ಟು ಹಣವನ್ನು ಕೇರಳ ಸರಕಾರವೇ ಒದಗಿಸಲಿದೆ. ಇಲ್ಲಿಯದೇ ನೆಲ, ಇಲ್ಲಿಯ ಜನರದೇ ಹಣ ಮತ್ತು ಸೌಕರ್ಯಗಳನ್ನು ಪಡೆದು ಇಲ್ಲಿನ ಜನರನ್ನೇ ದಿಕ್ಕುಗೇಡಿಗಳನ್ನಾಗಿಸುತ್ತಿದೆ ಈ ಯೋಜನೆ ಎಂಬ ಆಕ್ರೋಶದೊಂದಿಗೆ ಹೋರಾಟಗಾರರು ತಮ್ಮ ಪ್ರತಿಭಟನೆಯನ್ನು ಪ್ರಬಲಗೊಳಿಸುತ್ತಲೇ ಇದ್ದಾರೆ. ಈ ನಡುವೆಯೇ ಹೋರಾಟಗಾರರನ್ನು ಎದೆಗುಂದಿಸುವ ಸಂಚು ನಡೆಯುತ್ತಿದೆ ಎಂಬ ಆರೋಪವೂ ಕೇಳಿಬರತೊಡಗಿದೆ. ಮುಖ್ಯವಾಗಿ, ತಪ್ಪು ಆಪಾದನೆಗಳ ಮೂಲಕ ಹೋರಾಟಗಾರರ ನೈತಿಕ ಸ್ಥೈರ್ಯವನ್ನು ಅಡಗಿಸುವ ಕೆಲಸವಾಗುತ್ತಿದೆ ಎಂಬ ಆಕ್ಷೇಪ ವ್ಯಕ್ತವಾಗುತ್ತಿದೆ. ಹೋರಾಟದಲ್ಲಿ ತೊಡಗಿರುವವರ ಸ್ಥೈರ್ಯವನ್ನು ಹೀಗೆ ಕುಂದಿಸುವ ಮೂಲಕ ಹೋರಾಟವನ್ನು ದಮನಗೊಳಿಸಬಹುದು ಎಂಬುದು ಅವರ ನಿರೀಕ್ಷೆಯಾಗಿದ್ದರೆ, ತಾವು ಅದಕ್ಕೆ ಮಣಿಯಲಾರೆವು ಎಂಬ ದೃಢತೆಯೊಂದಿಗೆ ಹೋರಾಟಗಾರರು ನಿಂತಿದ್ದಾರೆ.

ವಿಜಿಂಗಂ ಬಂದರು ತಂದಿಕ್ಕುವ ಸಂಕಷ್ಟದ ವಿರುದ್ಧ ಕರಾವಳಿ ಸಮುದಾಯದ ದನಿಯಡಗಿಸುವ ಪ್ರಯತ್ನಕ್ಕೆ ಮಾಧ್ಯಮಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದೂ ಕೂಡ ಸತ್ಯಾಗ್ರಹ ನಿರತರು ಆರೋಪಿಸುತ್ತಿದ್ದಾರೆ. ಕಾರ್ಪೊರೇಟ್ ಬೆಂಬಲಿತ ಮಾಧ್ಯಮಗಳು ವಾಸ್ತವಕ್ಕೆ ವಿರುದ್ಧವಾದ ಕಥೆ ಕಟ್ಟುತ್ತಿವೆ ಎಂಬುದು ಪ್ರತಿಭಟನಾಕಾರರ ಆರೋಪ.

ವಿಜಿಂಗಂ ಬಂದರಿನಂಥ ಸಮುದ್ರದಲ್ಲಿನ ಅವೈಜ್ಞಾನಿಕ ನಿರ್ಮಾಣಗಳಿಂದಾಗಿ ತಿರುವನಂತಪುರಂ ಕರಾವಳಿಯಲ್ಲಿನ ಕರಾವಳಿ ಸವೆತಕ್ಕೆ ಸಮರ್ಥನೀಯ ಪರಿಹಾರವನ್ನು ಕಂಡುಕೊಳ್ಳಬೇಕು, ಕರಾವಳಿ ಸವೆತದಿಂದಾಗಿ ಮನೆಗಳನ್ನು ಕಳೆದುಕೊಂಡವರಿಗೆ ವಸತಿಗಳನ್ನು ಒದಗಿಸಬೇಕು, ಭೂಮಿ ಮತ್ತು ಮನೆಗಳನ್ನು ಕಳೆದುಕೊಂಡ ಜನರಿಗೆ ಪುನರ್ವಸತಿ ಕಲ್ಪಿಸಲು ಸಮಂಜಸವಾದ ನೀತಿಗಳನ್ನು ಯೋಜಿಸಿ ಜಾರಿಗೊಳಿಸಬೇಕು, ಸೀಮೆಎಣ್ಣೆ ಬೆಲೆ ಏರಿಕೆಯನ್ನು ಹಿಂಪಡೆದು, ತಮಿಳುನಾಡು ಮಾದರಿಯಲ್ಲಿ ಸಬ್ಸಿಡಿ ಸೀಮೆಎಣ್ಣೆ ಒದಗಿಸಬೇಕು, ಮೀನುಗಾರಿಕೆ ಹವಾಮಾನ ಎಚ್ಚರಿಕೆಯ ದಿನಗಳಲ್ಲಿನ ನಷ್ಟವನ್ನು ಸರಿದೂಗಿಸಲು ಮೀನುಗಾರರಿಗೆ ಕನಿಷ್ಠ ವೇತನವನ್ನು ಒದಗಿಸಬೇಕು, ತಾತ್ಕಾಲಿಕ ಪರಿಹಾರಗಳ ಬದಲಿಗೆ ಸಮಸ್ಯೆಗಳಿಗೆ ಸಮರ್ಥನೀಯ ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂಬುದು ಪ್ರತಿಭಟನಾಕಾರರ ಇತರ ಒತ್ತಾಯಗಳು.

ಮುಷ್ಕರವನ್ನು ಇತ್ಯರ್ಥಪಡಿಸುವ ಜವಾಬ್ದಾರಿಯನ್ನು ಪೂರೈಸುವ ಬದಲು ಆಡಳಿತಾರೂಢ ಸರಕಾರವು ಕರಾವಳಿಯ ಸಮುದಾಯಗಳಿಗೆ ಕಳಂಕ ತರುವ ಮತ್ತು ಅವರ ಹೋರಾಟವನ್ನು ಬುಡಮೇಲು ಮಾಡುವ ರಹಸ್ಯ ಪ್ರಯತ್ನಗಳನ್ನು ನಡೆಸುತ್ತಿರುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಕೂಡ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶೇಷ ಆಸಕ್ತಿಯಿಂದ ಅದಾನಿ ಬಂದರು ಯೋಜನೆ ಆರಂಭಿಸಿರುವ ಸರಕಾರಕ್ಕೆ, ಕರಾವಳಿಯ ಮೇಲೆ ಮತ್ತು ಕರಾವಳಿ ಜನರ ಬದುಕಿನ ಮೇಲೆ ಅದು ಉಂಟುಮಾಡಬಲ್ಲ ಆಘಾತಗಳ ಕುರಿತು ತಿಳಿಯುವ ವ್ಯವಧಾನವಿಲ್ಲ ಎಂಬ ಸಂಕಟ ಹೋರಾಟಗಾರರದ್ದು.

ಯೋಜನೆಯೊಂದು ಸರಕಾರದ ಬೆಂಬಲದೊಂದಿಗೆ ಕಾರ್ಯಗತಗೊಳ್ಳುವಾಗಿನ ಎಲ್ಲ ಆತಂಕಗಳೂ ವಿಜಿಂಗಂ ಯೋಜನೆಯ ನಿರ್ಮಾಣ ಕಾರ್ಯ ನಡೆದಿರುವ ಕೇರಳದ ನೆಲದಲ್ಲಿ ಕಾಣಿಸಿಕೊಂಡಿವೆ. ರಾಜಕೀಯದ ಎದುರು, ಅದರ ಹಿತಾಸಕ್ತಿಗಳ ಎದುರು ಜನರ ಬದುಕು, ಪರಿಸರ, ನೆಲದ ನಾಳೆಗಳು ಇವಾವುವೂ ಮುಖ್ಯವಾಗದೆ ಕಡೆಗಣನೆಗೆ ಒಳಗಾಗುವುದು, ಎಲ್ಲ ಜನವಿರೋಧಿ ಸತ್ಯಗಳನ್ನು ಮರೆಮಾಚುವುದು ನಡೆಯುತ್ತದೆ ಎಂಬ ಆತಂಕವನ್ನೇ ಈಗ ವಿಜಿಂಗಂ ಯೋಜನೆ ವಿರೋಧಿ ಹೋರಾಟಗಾರರೂ ವ್ಯಕ್ತಪಡಿಸುತ್ತಿರುವುದು. ನಿಜವಾಗಿಯೂ ಈ ಯೋಜನೆಯಿಂದ ಬಾಧಿತವಾಗುವ ಸಮುದಾಯಗಳ ನಾಳೆಗಳೆಂಥವು ಎಂಬ ಬಗ್ಗೆ ಅವರೆದುರಿಗೂ ಇರುವುದು ಪ್ರಶ್ನೆಗಳು ಮಾತ್ರ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top