ಮಹಿಳಾ ಕ್ರಿಕೆಟ್ ಆಟಗಾರ್ತಿಯ ಮೃತದೇಹ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ
ಭುವನೇಶ್ವರ: ಒಡಿಶಾದ ಮಹಿಳಾ ಕ್ರಿಕೆಟ್ ಆಟಗಾರ್ತಿ ರಾಜಶ್ರೀ ಸ್ವೈನ್ ಅವರ ಮೃತದೇಹ ಕತಕ್ ನಗರ ಸಮೀಪದ ಅತಾಗಢ ಪ್ರದೇಶದ ದಟ್ಟ ಅರಣ್ಯದಲ್ಲಿ ಮರವೊಂದಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶುಕ್ರವಾರ ಪತ್ತೆಯಾಗಿದೆ ಎಂದು ಕತಕ್ ಪೊಲೀಸ್ ಉಪ ಆಯುಕ್ತ ಪಿನಾಕ್ ಮಿಶ್ರಾ ಅವರು ತಿಳಿಸಿದ್ದಾರೆ. ಸ್ವೈನ್ ಅವರು ಜನವರಿ 11ರಂದು ನಾಪತ್ತೆಯಾಗಿದ್ದರು.
ಸ್ವೈನ್ ನಾಪತ್ತೆಯಾಗಿರುವುದಾಗಿ ಅವರ ಕೋಚ್ ಕತಕ್ ನ ಮಂಗಳಾಬಾದ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಗುರುದಿಝಾತಿಯಾ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಸ್ವೈನ್ ಸಾವಿಗೆ ಕಾರಣವನ್ನು ಪೊಲೀಸರು ಇದುವರೆಗೆ ಪತ್ತೆ ಮಾಡಿಲ್ಲ. ಆದರೆ, ‘‘ಸ್ವೈನ್ ಅವರನ್ನು ಹತ್ಯೆಗೈಯಲಾಗಿದೆ.
ಅವರ ಮೃತದೇಹಲ್ಲಿ ಕಂಡು ಬಂದಿರುವ ಗಾಯಗಳು ಹಾಗೂ ಕಣ್ಣಿಗೆ ಉಂಟಾಗಿರುವ ಹಾನಿ ಇದಕ್ಕೆ ಸಾಕ್ಷಿ’’ ಎಂದು ಕುಟುಂಬ ಆರೋಪಿಸಿದೆ. ಸ್ವೈನ್ ಅವರ ಸ್ಕೂಟರ್ ಸಮೀಪದ ಅರಣ್ಯದಲ್ಲಿ ಪತ್ತೆಯಾಗಿದೆ. ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣವನ್ನು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.