ಅನಾಥಾಲಯದ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ: 5 ಮಂದಿ ವಶ
ಕಲ್ಪಟ್ಟ,ಮಾ.7: ವಯನಾಡ್ ಯತೀಂಖಾನದಲ್ಲಿ (ಅನಾಥಾಲಯ) 7 ಮಂದಿ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದ್ದು, ಆರು ಮಂದಿ ಆರೋಪಿಗಳ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಐವರನ್ನು ಕಸ್ಟಡಿಗೆ ಪಡೆದಿದ್ದಾರೆ.
ವಿದ್ಯಾರ್ಥಿನಿಯರ ವಸತಿಗ್ರಹಕ್ಕೆ ಹೋಗುವ ದಾರಿಯಲ್ಲಿ ಬಾಲಕಿಯರು ಕಿರುಕುಳಕ್ಕೊಳಗಾಗಿದ್ದಾರೆ. ಬಾಲಕಿಯರನ್ನು ದಾರಿ ಬದಿಯಲ್ಲಿರುವ ಅಂಗಡಿಗೆ ಕರೆಯಿಸಿಕೊಂಡು ಆರೋಪಿಗಳು ಲೈಂಗಿಕ ಕಿರುಕುಳ ನೀಡಿದ್ದಾರೆ.
ಈ ಕುರಿತು ಮೊದಲು ಸಂದೇಹಗೊಂಡ ಭದ್ರತಾ ಉದ್ಯೋಗಿ ವಸತಿಗ್ರಹದ ಅಧಿಕಾರಿಗಳಿಗೆ ತಿಳಿಸಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಬಂದು ಬಾಲಕಿಯರ ಕೌನ್ಸಿಲಿಂಗ್ ನಡೆಸಿದ್ದಾರೆ.
ಆರೋಪಿಗಳು ಕಳೆದ ಜನವರಿ ತಿಂಗಳಿಂದ ಈ ರೀತಿ ಹಲವು ಬಾರಿ ತಮಗೆ ಕಿರುಕುಳ ನೀಡಿದ್ದಾಗಿ ಬಾಲಕಿಯರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಪೊಲೀಸರು ಪೊಕ್ಸೊ ಕಾನೂನಿನಡಿಯಲ್ಲಿ ಕೇಸು ದಾಖಲಿಸಿದ್ದಾರೆ.
ಗುರುತು ಪತ್ತೆಹಚ್ಚು ವ ಪೆರೇಡ್ ನಡೆಸಲಿಕ್ಕಿರುವುದರಿಂದ ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ವಿವರವನ್ನು ಬಹಿರಂಗಪಡಿಸಿಲ್ಲ. ವಸತಿಗ್ರಹದಲ್ಲಿರುವ ಇತರ ಹೆಣ್ಣುಮಕ್ಕಳು ಕೂಡಾ ಕಿರುಕುಳಕ್ಕೊಳಗಾಗಿದ್ದಾರೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ವರದಿಯಾಗಿದೆ.