ಜೆಇಇ ಪರೀಕ್ಷೆಯಲ್ಲಿ ತೇರ್ಗಡೆ; ಪಿಯುಸಿಯಲ್ಲಿ ಫೇಲು..!
ಪಾಟ್ನ, ಜೂ.1: ದೇಶದಲ್ಲಿ ನಡೆಸಲಾಗುವ ಅತ್ಯಂತ ಕಠಿಣ ಪರೀಕ್ಷೆ ಎನಿಸಿರುವ ಜೆಇಇ(ಮೈನ್) ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಬಿಹಾರದ ಪರೀಕ್ಷಾ ಮಂಡಳಿ ನಡೆಸುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಘಟನೆ ನಡೆದಿದೆ.
ಮೀಸಲಾತಿ ಕೋಟದಡಿ ಜೆಇಇ (ಮೈನ್ಸ್) ಪರೀಕ್ಷೆ ಬರೆದಿದ್ದ ವಿವೇಕ್ ಕುಮಾರ್ ಎಂಬಾತ 360 ಅಂಕಗಳಲ್ಲಿ 109 ಅಂಕ ಪಡೆದಿದ್ದಾನೆ. ಇಲ್ಲಿ 49 ನಿಗದಿತ ಕನಿಷ್ಟ ಅಂಕವಾಗಿದ್ದು ವಿವೇಕ್ ತೇರ್ಗಡೆಯಾದ ಖುಷಿಯಲ್ಲಿದ್ದ. ಆದರೆ ಈ ಖುಷಿ ಹೆಚ್ಚು ಸಮಯ ಇರಲಿಲ್ಲ. ಬಿಹಾರದ ಪದವಿಪೂರ್ವ ಪರೀಕ್ಷಾ ಮಂಡಳಿ ನಡೆಸಿದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈತ ಅನುತ್ತೀರ್ಣನಾಗಿದ್ದ. ಇದೇ ರೀತಿಯ ಅನುಭವ ಹಲವು ವಿದ್ಯಾರ್ಥಿಗಳಿಗೆ ಆಗಿದೆ. ಶುಭಂ ಶರ್ಮ ಹಾಗೂ ಓಂಪ್ರಿಯ ಎಂಬ ಇಬ್ಬರು ವಿದ್ಯಾರ್ಥಿಗಳು ಕೂಡಾ ಜೆಇಇ(ಮೈನ್) ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಬಿಹಾರದ ಪಿಯು ಪರೀಕ್ಷಾ ಮಂಡಳಿ ನಡೆಸುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದಾರೆ.
ಜೆಇಇ ಪ್ರವೇಶ ಪರೀಕ್ಷೆ ಅತ್ಯಂತ ಕಠಿಣವಾಗಿದ್ದು ಇಲ್ಲಿ ಪರೀಕ್ಷೆ ಬರೆದ ಐವರು ವಿದ್ಯಾರ್ಥಿಗಳಲ್ಲಿ ಕೇವಲ ಒಬ್ಬ ವಿದ್ಯಾರ್ಥಿ ಮಾತ್ರ ಮುಂದಿನ ಹಂತಕ್ಕೆ ತೇರ್ಗಡೆಯಾಗುತ್ತಾನೆ.