ಶಾಲಾ ನಿರ್ದೇಶಕ ಮತ್ತು ಶಿಕ್ಷಕನಿಂದ ಹದಿಹರೆಯದ ಬಾಲಕಿಯ ಅತ್ಯಾಚಾರ
ಸಿಕಾರ್(ರಾಜಸ್ಥಾನ),ಸೆ.18: ಸಿಕಾರ್ ಜಿಲ್ಲೆಯಲ್ಲಿ ಶಾಲೆಯೊಂದರ ನಿರ್ದೇಶಕ ಹಾಗೂ ಶಿಕ್ಷಕ ಸೇರಿಕೊಂಡು 18ರ ಹರೆಯದ ಬಾಲಕಿಯೋರ್ವಳ ಮೇಲೆ ಅತ್ಯಾಚಾರ ನಡೆಸಿರುವುದು ವರದಿಯಾಗಿದೆ.
ಆರೋಪಿಗಳು ಕೆಲವು ದಿನಗಳಿಂದ ವಿಶೇಷ ತರಗತಿಯ ನೆಪದಲ್ಲಿ ತಮ್ಮ ಪುತ್ರಿಯನ್ನು ಶಾಲೆಗೆ ಕರೆಸಿಕೊಂಡು ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದರು. ಆಕೆ ಗರ್ಭಿಣಿ ಯಾದಾಗ ಶಹಪುರ ಪಟ್ಟಣದ ಆಸ್ಪತ್ರೆಯೊಂದರಲ್ಲಿ ಗರ್ಭಪಾತ ಮಾಡಿಸಿದ್ದಾರೆ ಎಂದು ಬಾಲಕಿಯ ಹೆತ್ತವರು ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಕುಶಾಲ ಸಿಂಗ್ ತಿಳಿಸಿದರು.
ಗರ್ಭಪಾತದ ಬಳಿಕ ಬಾಲಕಿಯ ಆರೋಗ್ಯ ಬಿಗಡಾಯಿಸಿದಾಗ ಆಕೆಯ ಮೇಲೆ ಅತ್ಯಾಚಾರ ನಡೆದಿದ್ದು ಬೆಳಕಿಗೆ ಬಂದಿತ್ತು.
ಪ್ರಜ್ಞಾಹೀನಳಾಗಿರುವ ಬಾಲಕಿಯನ್ನು ಜೈಪುರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಕೆಯ ಹೇಳಿಕೆಯನ್ನು ಪೊಲೀಸರು ಇನ್ನಷ್ಟೇ ದಾಖಲಿಸಿಕೊಳ್ಳಬೇಕಿದೆ.
ಆರೋಪಿಗಳಾದ ಶಾಲಾ ನಿರ್ದೇಶಕ ಜಗದೀಶ ಯಾದವ ಮತ್ತು ಶಿಕ್ಷಕ ಜಗತ್ ಸಿಂಗ್ ಗುರ್ಜರ್ ವಿರುದ್ಧ ಸಾಮೂಹಿಕ ಅತ್ಯಾಚಾರ ಮತ್ತು ಬಲವಂತದ ಗರ್ಭಪಾತ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು, ಅಕ್ರಮವಾಗಿ ಗರ್ಭಪಾತ ಮಾಡಿಸಿದ ಮತ್ತು ಸಾಕ್ಷಾಧಾರವನ್ನು ನಾಶಗೊಳಿಸಿದ ಆರೋಪದಲ್ಲಿ ಡಾ.ರಜನೀಶ ಶರ್ಮಾ ಮತ್ತು ಆತನ ಪತ್ನಿ ಕಾನನ್ ವಿರುದ್ಧವೂ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.